ADVERTISEMENT

ಜೆಡಿಎಸ್ 60 ಸ್ಥಾನ ಬಂದರೆ ರಾಜಕೀಯ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:01 IST
Last Updated 23 ಏಪ್ರಿಲ್ 2017, 10:01 IST

ಪಡುಬಿದ್ರಿ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಇಂದಿನ ಸ್ಥಿತಿಯಲ್ಲಿ 50ರಿಂದ 60 ಸ್ಥಾನಗಳನ್ನು ಗೆದ್ದರೆ, ನಾನು ಗೆಲ್ಲುವ ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಸವಾಲು ಹಾಕಿದರು.

ಪಡುಬಿದ್ರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯ ಬದುಕೇ ಅನಿವಾರ್ಯ. ನಮಗೆ ರಾಜಕೀಯವಿಲ್ಲದಿ ದ್ದರೂ ಬದುಕಲು ಗೊತ್ತಿದೆ. ಅವರು ಹೇಳಿದ್ದಕ್ಕೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಇದನ್ನು ನಾನೇ ಮಾಧ್ಯಮದ ಮುಂದೆ ಹೇಳಿದ್ದೇನೆ. ಇತರ ಯಾರೂ ಅಂತಹ ಹೇಳಿಕೆ ನೀಡಿಲ್ಲ. ಮಾಧ್ಯಮ ಮೂಲಕ ಇತ್ತೀಚೆಗೆ ಚೆಲುವರಾಯಸ್ವಾಮಿ ಅವರಿಗೆ ಧರ್ಮಸ್ಥಳದಲ್ಲಿ ಆಣೆ ಮಾಡಲು ಸವಾಲು ಹಾಕಿದ್ದಾರೆ. ದೇವರು ಹಾಗೂ ಅಲ್ಲಾಹುನ ಮೇಲೆ ನನಗೆ ವಿಶ್ವಾಸವಿದೆ. ನಾನು ಕುರಾನ್ ಜತೆ ಧರ್ಮಸ್ಥಳಕ್ಕೆ ಬರಲು ಸಿದ್ಧನಿದ್ದೇನೆ. ಕುಮಾರಸ್ವಾಮಿ ಅವರು ಆಣೆ ಪ್ರಮಾಣಕ್ಕೆ ಸಿದ್ಧರಿ ದ್ದಾರೆಯೇ?’ ಎಂದು ಜಮೀರ್‌ ಪ್ರಶ್ನಿಸಿದರು.

‘ಕುಮಾರಸ್ವಾಮಿ ಏನು ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. 2007ರಲ್ಲಿ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ವಿಷಯದಲ್ಲಿ ಆಣೆ ಮಾಡಿ, ಕೊಟ್ಟ ಮಾತನ್ನು ತಪ್ಪಿದ ಅವರದ್ದು ದ್ವಿಮುಖ ನೀತಿ. ಜೆಡಿಎಸ್‌ನಲ್ಲಿ ರಾಜ್ಯ ನಾಯಕರು ಮಾತ್ರ ಅಲ್ಲ, ಉಡುಪಿ ಜಿಲ್ಲೆಯ ನಾಯಕರನ್ನು ಕಡೆಗಣಿಸಿದ್ದಾರೆ. ಇಲ್ಲಿನ ಜೆಡಿಎಸ್ ನಾಯಕ ದೇವಿಪ್ರಸಾದ್ ಶೆಟ್ಟಿ ಹಾಗೂ ಗುಲಾಂ ಮಹಮ್ಮದ್ ಅವರನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಎಚ್‌.ಡಿ.ದೇವೇಗೌಡ ಅವರು ನನ್ನನ್ನು ಬಿಡಿ, ಯಾರನ್ನು ರಾಜಕೀಯ ದಲ್ಲಿ ಮೇಲೆ ಬರಲು ಬಿಡುವುದಿಲ್ಲ. ಯಾರೇ ಬೆಳೆಯುವ ನಾಯಕರಿದ್ದರೂ ಅವರನ್ನು ಚಿವುಟಿ ಹಾಕಲು ಹೇಸುವು ದಿಲ್ಲ. ಅವರದ್ದೇನಿದ್ದರೂ ಕುಟುಂಬ ರಾಜಕೀಯದ ಪಕ್ಷ. ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರ ಸ್ವಾಮಿ ಅವರು ಇದೀಗ ನಾಗಮಂಗಲ ದಲ್ಲಿ ಮನೆ- ಮನೆ ತಿರುಗುತ್ತಿದ್ದಾರೆ. ಇಂತಹ ಕೀಳು ರಾಜಕೀಯ ಬಿಡಲಿ. ಜನ ಏನು ಅಂತ ಚುನಾವಣೆಯಲ್ಲಿ ತೀರ್ಮಾ ನಿಸುತ್ತಾರೆ. ನಾವು ಎಂದೂ ಅ ರೀತಿ ಮಾಡುವುದಿಲ್ಲ’ ಎಂದು ಆರೋ ಪಿಸಿದರು.

‘ಎಲ್ಲ ಬಂಡಾಯ ಶಾಸಕರಿಗೂ ಕಾಂಗ್ರೆಸ್‌ನಲ್ಲಿ ಸೀಟು ಖಚಿತ. ಏಳು ಅಲ್ಲ, ಇನ್ನೂ ಎಂಟು ಶಾಸಕರು ಇದ್ದಾರೆ. ನಾಲ್ಕು ತಿಂಗಳು ಕಳೆಯಲಿ, ಒಟ್ಟು 15 ಮಂದಿ ನಾವಿದ್ದೇವೆ. ನನ್ನ ಮನಸು ಜೆಡಿಎಸ್ ಕಡೆ ಇಲ್ಲ. ಮತ್ತೆ ಕರೆದರೂ ಜೆಡಿಎಸ್‌ಗೆ ಮರಳಲ್ಲ. ಚಾಮರಾಜಪೇಟೆ ಜನ ನನ್ನನ್ನು ರಾಜಕಾರಣಿ ಅಂತ ಭಾವಿಸದೆ, ಮನೆ ಮಗನಂತೆ ಬೆಳೆಸಿ ದ್ದಾರೆ. ನಾನು ಯಾವ ಪಕ್ಷದಲ್ಲಿ ನಿಂತರೂ ಜನ ಗೆಲ್ಲಿಸ್ತಾರೆ. ನನಗೆ ಕಾಂಗ್ರೆಸ್‌ನಲ್ಲಿ ಸೀಟು ಖಚಿತ. ರಾಹುಲ್ ಗಾಂಧಿ ಮತ್ತು ಸೋನಿಯಗಾಂಧಿ ಮೇಲೆ ವಿಶ್ವಾಸವಿದೆ’ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಮುಜಾಹಿದ್, ಶಕಿಲ್ ನವಾಜ್, ವೆಂಕಟೇಶ್, ಆರೀಫ್ ಪಾಷಾ, ಗುಲಾಮ್ ಮಹಮ್ಮದ್, ದೇವಿಪ್ರಸಾದ್ ಶೆಟ್ಟಿ, ಶೇಖ್ ಅಹಮದ್ ಬೇಂಗಳೆ, ಶಾಲಿಹ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.