ADVERTISEMENT

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ವೀರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:27 IST
Last Updated 11 ನವೆಂಬರ್ 2017, 9:27 IST

ಉಡುಪಿ: ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಜಯಂತಿ ವಿರೋಧಿಸಿ ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧನ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಕಳೆದ ವರ್ಷವೂ ಅವರು ಟಿಪ್ಪು ಜಯಂತಿಗೆ ಗೈರು ಹಾಜರಾಗಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ‘ರಾಜ್ಯದಲ್ಲಿ ಪ್ರಥಮ ವರ್ಷ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದಾಗ ಯಾವುದೇ ದ್ವಂದ್ವ, ಗೊಂದಲ, ವಿರೋಧ ಇರಲಿಲ್ಲ. ಆದರೆ, ಚುನಾವಣೆ ಹತ್ತಿರದಲ್ಲಿರುವುದರಿಂದ ವಿವಾದ ಮಾಡಲಾಗುತ್ತಿದೆ. ಸಮಾಜವನ್ನು ಒಂದು ಮಾಡುವ ಕೆಲಸ ಮಾಡಬೇಕೇ ವಿನಃ ವಿಂಗಡಿಸುವ ಕೆಲಸವನ್ನು ಯಾರು ಮಾಡಬಾರದು’ ಎಂದು ಹೇಳಿದರು.

‘ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಜೀವ ಬಲಿದಾನ ಮಾಡಿದವರು. ಅನೇಕ ದೇವಸ್ಥಾನ, ಮಸೀದಿಗಳಿಗೂ ಪೂರಕ ಕೆಲಸ ಮಾಡಿದರು. ಅಂತಹ ವ್ಯಕ್ತಿಗಳನ್ನು ಸ್ಮರಿಸುವುದು ಸರ್ಕಾರದ ಕರ್ತವ್ಯ’ ಎಂದು ಅವರು ಹೇಳಿದರು.

ADVERTISEMENT

‘ದೇಶದಲ್ಲಿ ವಿಭಿನ್ನ ಧರ್ಮ, ಜಾತಿ ಹಾಗೂ ಸಂಸ್ಕೃತಿ ಇದೆ. ಯಾವ ವ್ಯಕ್ತಿಯೂ ಇಂತಹುದೆ ಧರ್ಮದಲ್ಲಿ, ಜಾತಿಯಲ್ಲಿ ಹುಟ್ಟಬೇಕು ಎಂದು ಬಯಸಿರುವುದಿಲ್ಲ. ತಂದೆ– ತಾಯಿ ಯಾವ ಧರ್ಮ ಆಚರಣೆ ಮಾಡುವರೋ ಅದೇ ಧರ್ಮವನ್ನು ಮಕ್ಕಳು ಅನುರಿಸುತ್ತಾರೆ. ಹಿಂದೂ ಧರ್ಮ ಎಲ್ಲ ಜನರ ಒಳಿತಿನ ಮಹತ್ವ ಹೇಳುತ್ತದೆ. ಕ್ರೈಸ್ತ ಧರ್ಮ ಪ್ರೀತಿ– ಕರುಣೆಯ ಮಹತ್ವ ಸಾರಿ ಶತ್ರುಗಳನ್ನು ಪ್ರೀತಿಸಿ ಎಂಬ ಪಾಠ ಹೇಳುತ್ತದೆ. ಇಸ್ಲಾಂ ಧರ್ಮ ಶಾಂತಿ– ಸಮಾನತೆ ಬೋಧಿಸುತ್ತದೆ’ ಎಂದು ಅವರು ಹೇಳಿದರು.

ಈ ಎಲ್ಲ ವಿಷಯಗಳ ಸಾರಾಂಶವಾದ ಸತ್ಯ– ಶಾಂತಿ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ್ಯ ಹೋರಾಟ ನಡೆಯಿತು. ದೇಶವನ್ನು ಬ್ರಿಟಿಷ್‌ ಆಡಳಿತದಿಂದ ಮುಕ್ತಿ ಕೊಡಿಸಲು ಸಾವಿರಾರು ಜನರು ತ್ಯಾಗ– ಬಲಿದಾನ ಮಾಡಿದ್ದಾರೆ. ಅಂತಹ ಬಲಿದಾನಗಳನ್ನು ಸ್ಮರಿಸಬೇಕು ಎಂದು ಅವರು ಹೇಳಿದರು.

ಒಂದು ಧರ್ಮದವರು ಇನ್ನೊಂದು ಧರ್ಮದ ಆಚರಣೆಗೆ ಸಹಾಯ ಮಾಡಿದ ನೂರಾರು ಉದಾಹರಣೆಗಳಿವೆ. ಹಾಜಿ ಅಬ್ದುಲ್ಲಾ ಅವರು ಕೃಷ್ಣ ಮಠದ ಲಕ್ಷ ದೀಪೋತ್ಸವಕ್ಕೆ ಎಣ್ಣೆ, ಹಕ್ಕಿ ನೀಡಿ ಸಹಾಯ ಮಾಡಿದ್ದರು. ಬ್ಯಾರಿಯೊಬ್ಬರು ಬಪ್ಪನಾಡು ದೇವಸ್ಥಾನವನ್ನು ನವೀಕರಣ ಮಾಡಿಸಿದರು ಎಂದು ಉದಾಹರಣೆ ನೀಡಿದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಡಾ. ಸಂಜೀವ್ ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಸಿಇಒ ಶಿವಾನಂದ ಕಾಪಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.