ADVERTISEMENT

ಡಿ.ಸಿ ಕಚೇರಿ ಎದುರು ಸ್ಥಳೀಯರ ಪ್ರತಿಭಟನೆ

ಹೊಸಂಗಡಿಯಲ್ಲಿ ಬಾರ್‌ ಆರಂಭಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 9:18 IST
Last Updated 14 ಡಿಸೆಂಬರ್ 2017, 9:18 IST

ಉಡುಪಿ: ಕುಂದಾಪುರ ತಾಲ್ಲೂಕಿನ ಹೊಸಂಗಡಿಯ ಬದ್ರಿ ಜುಮಾ ಮಸೀದಿ ಸಮೀಪವೇ ಬಾರ್‌ ಆರಂಭಿಸುವ ಪ್ರಯತ್ನ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಮಸೀದಿ ಸದಸ್ಯರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹೊಸಂಗಡಿ ಗ್ರಾಮದ ಆ ಜಾಗ ಅಕ್ರಮ– ಸಕ್ರಮ ದಡ್ಡಿಯಾಗಿದ್ದು, ದರ್ಖಾಸ್ತು ಹಕ್ಕಾಗಿ ವ್ಯಕ್ತಿಯೊಬ್ಬರಿಗೆ ಪರಭಾರೆಯಾಗಿದೆ. ಆ ಸ್ಥಳದ ಸಮೀಪದಲ್ಲಿಯೇ ಬದ್ರಿ ಜುಮಾ ಮಸೀದಿ ಇದೆ. ಮಸೀದಿ ಹಾಗೂ ದೇವಸ್ಥಾನದಿಂದ ಇಂತಿಷ್ಟು ದೂರದಲ್ಲಿ ಮಾತ್ರ ಬಾರ್ ತೆರೆಯಬಹುದು ಎಂಬ ನಿಯಮ ಇರುವುದರಿಂದ, ನಿಯಮಕ್ಕೆ ಅನುಸಾರವಾಗಿ ಅಂತರ ಇದೆ ಎಂದು ಕೃತಕವಾಗಿ ತೋರಿಸುವ ಪ್ರಯತ್ನ ಸಹ ಮಾಡುತ್ತಿದ್ದಾರೆ.

ಮುಖ್ಯ ರಸ್ತೆಯಿಂದ ತಿರುವು ಮಾಡಿ ಗುರುತಿಸಿರುವ ಜಾಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಮುಸ್ಲಿಂ ಒಕ್ಕೂಟದ ಮುಖಂಡ ರಫೀಕ್ ಗಂಗೊಳ್ಳಿ ಹೇಳಿದರು.

ADVERTISEMENT

ಈ ಹಿಂದೆ ಸಹ ಅಬಕಾರಿ ಇಲಾಖೆಯರವರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದರು. ಆದರೆ ಬಾರ್ ಆರಂಭಿಸಲು ಎಲ್ಲ ರೀತಿಯ ತಯಾರಿ ಅಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಗ್ರಾಮಸ್ಥರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು.

ಅಲ್ಲಿ ಯಾವುದೇ ಕಾರಣಕ್ಕೂ ಬಾರ್ ಆರಂಭಿಸಲು ಅನುಮತಿ ನೀಡಬಾರದು. ಒಂದು ವೇಳೆ ನೀಡಿದರೆ, ಅದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ. ಸಾಮರಸ್ಯಕ್ಕೂ ಧಕ್ಕೆ ಆಗಲಿದೆ ಎಂದು ಅವರು ಹೇಳಿದರು.

ರಾಜಾರಾಂ ಗಾಣಿಗ, ಶೈಲಾ, ದಾದಾಪೀರ್‌, ಹಾಜ್‌ ಸಾಹೇಬ್‌, ಇಸ್ಮಾಯಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.