ADVERTISEMENT

ತ್ರಾಸಿ ದುರಂತ: ಸಂತಾಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 11:19 IST
Last Updated 30 ಜೂನ್ 2016, 11:19 IST

ಉಡುಪಿ: ಕುಂದಾಪುರ ತ್ರಾಸಿ ಮೊವಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ಈಚೆಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪಿದ್ದ 8 ಮಂದಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ವತಿಯಿಂದ ಸಂತಾಪ ಸೂಚಿಸಲಾಯಿತು.

ಸಂಘದ ಅಧ್ಯಕ್ಷ ಎಂ. ನಾರಾಯಣ ಭಟ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಮಕ್ಕಳ ಸಾವಿಗೆ ನಿಯಮ ಪಾಲಿಸದ ಖಾಸಗಿ ಶಾಲೆ, ವಾಹನ ಚಾಲಕರು ಮಾತ್ರ ಕಾರಣವಲ್ಲ. ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಒಳಪ್ರದೇಶದ ರಸ್ತೆಗಳಲ್ಲಿ ಅತೀ ವೇಗದಲ್ಲಿ ಅಜಾಗರೂಕತೆಯಿಂದ ಸಾರಿಗೆ, ಸರಕು ವಾಹನಗಳನ್ನು ಓಡಿಸುವ ಚಾಲಕರು ಕೂಡ ಕಾರಣರು. ಅಂಥ ಚಾಲಕರಿಗೆ ಶಿಕ್ಷೆ ವಿಧಿಸುವುದರ ಜತೆಗೆ ಅವರ ಚಾಲನಾ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಎಲ್ಲ ವಾಹನಗಳಿಗೆ ವೇಗಮಿತಿ ನಿಯಂತ್ರಕವನ್ನು ಅಳವಡಿಸುವ ಕಾನೂನು ಜಾರಿಗೆ ತಂದು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮಾತ್ರ, ಇಂಥ ದುರ್ಘಟನೆಗಳನ್ನು ನಿಯಂತ್ರಿಸಲು ಸಾಧ್ಯ. ಆದ್ದರಿಂದ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ಸರ್ಕಾರವನ್ನು ಒತ್ತಾಯ ಮಾಡಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಮಾಡಲಾಯಿತು.

ಸಂಘದ ಉಪಾಧ್ಯಕ್ಷೆ ಎಚ್‌. ಕೃಷ್ಣಾಬಾಯಿ, ಕಾರ್ಯದರ್ಶಿ ಎಸ್‌.ಎಸ್‌. ತೋನ್ಸೆ, ಕೋಶಾಧಿಕಾರಿ ಕೆ. ಪ್ರಭಾಕರ ಇದ್ದರು. ಸದಸ್ಯ ಕೆ. ಸಂಜೀವ ನಾಯಕ್‌ ಸ್ವಾಗತಿಸಿದರು, ಜಂಟಿ ಕಾರ್ಯದರ್ಶಿ ಪಾಂಡು ಎಂ. ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.