ADVERTISEMENT

ದೇಶ ಬಿಟ್ಟು ಓಡಿದವರ ಸಾಲ ಮನ್ನಾ

ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ: ಶಾಸಕ ಸೊರಕೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 13:13 IST
Last Updated 23 ಏಪ್ರಿಲ್ 2018, 13:13 IST

ಉಡುಪಿ: ‘ಉದ್ಯಮಿಗಳ ₹ 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಸಂಕಷ್ಟದಲ್ಲಿರುವ ದೇಶದ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಉದ್ಯಮಿಗಳಿಗೆ ಒಂದು ನೀತಿ. ಸಾಮಾನ್ಯ ಜನರು ಹಾಗೂ ರೈತರಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ’ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ವಾಗ್ದಾಳಿ ನಡೆಸಿದರು.

ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಜನಾಶೀರ್ವಾದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘₹11,500 ಕೋಟಿ ಸಾಲ ಮಾಡಿದ ನೀರವ್ ಮೋದಿ, ₹9,500 ಕೋಟಿ ಸಾಲ ಮಾಡಿದ ವಿಜಯ್ ಮಲ್ಯ ವಿದೇಶಕ್ಕೆ ಓಡಿ ಹೋದರು. ಆದರೆ ಒಂದಿಷ್ಟು ಸಾಲ ಮಾಡಿದ ಬಡವರ ಸಾಲ ವಸೂಲಿ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದರಿಂದಾಗಿ ಬಡವರು ಬೀದಿಗೆ ಬರುವಂತಾಗಿದೆ‘ ಎಂದರು.

ADVERTISEMENT

‘ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ದೇಶದ ಯುವ ಜನರಿಗೆ ಭರವಸೆ ನೀಡಿ ಮತ ಪಡೆದಿದ್ದರು. ಆದರೆ ಲೋಕಸಭೆಯಲ್ಲಿ ಸರ್ಕಾರವೇ ನೀಡಿರುವ ಉತ್ತರದಂತೆ ಈ ವರೆಗೆ ಕೇವಲ 8 ಲಕ್ಷ ಉದ್ಯೋಗವನ್ನು ಮಾತ್ರ ಸೃಷ್ಟಿ ಮಾಡಿದ್ದಾರೆ. ಮತ ನೀಡಿದ ಯುವಕರಿಗೆ ಮೋಸ ಮಾಡಿದ್ದಾರೆ. ಚುನಾವಣೆಯ ವೇಳೆ ನೀಡಿದ ಯಾವೊಂದೂ ಬೇಡಿಕೆ ಈಡೇರಿಸಿಲ್ಲ’ ಎಂದರು.

‘ಕಳೆದ ಬಾರಿ ಚುನಾವಣೆಯ ವೇಳೆ ಕಾಂಗ್ರೆಸ್ 165 ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಪ್ರಣಾಳಿಕೆಯಲ್ಲಿ ಇಲ್ಲದ ಹತ್ತಾರು ಯೋಜನೆಗಳನ್ನು ಸಹ ಕಾರಿ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್, ಅನಿಲ ಭಾಗ್ಯ, ರೈತರ ಸಾಲ ಮನ್ನಾ ಅದರಲ್ಲಿ ಪ್ರಮುಖವಾದ್ದು. ಮತ್ತೊಮ್ಮೆ ಕಾಂಗ್ರೆಸ್‌ಗೆ ಅವಕಾಶ ನೀಡಿ, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕೆರೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಮುಖಂಡರಾದ ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು, ವಿಶ್ವಾಸ್ ಅಮಿನ್, ಕ್ರಿಸ್ಟನ್ ಅಲ್ಮೇಡ, ವೇರೋನಿಕ ಕರ್ನೇಲಿಯೊ, ಎಂ.ಎ. ಗಫೂರ್, ಉದಯ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.

‘ಬಿಎಸ್‌ವೈ ಪಕ್ಕವೇ ಶೋಭಾ ಸಿಗುತ್ತಾರೆ’

‘ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಭಾಷಣ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ನಮ್ಮ ಒಬ್ಬ ಸೈನಿಕನನ್ನು ಕೊಂದರೆ ಪಾಕಿಸ್ತಾನದ ಹತ್ತು ಸೈನಿಕರ ರುಂಡ್‌ ತರುತ್ತೇವೆ ಎಂದಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಅವರು ಕ್ಷೇತ್ರದಲ್ಲಿ ಕಾಣಿಸಿಲ್ಲ. ಕೆಲವರು ಸಂಸದೆ ಕಾಣೆಯಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆದರು. ಅವರು ಕಾಣೆಯಾಗಿದ್ದಾರೆ ಎಂದು ಏಕೆ ಹೇಳುತ್ತೀರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಇರುವೆಡೆ ಅಕ್ಕಪಕ್ಕದಲ್ಲಿ ಹುಡುಕಿದರೆ ಸಿಗುತ್ತಾರೆ ಎಂದು ಹೇಳಿದೆ’ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.

ವಿದೇಶದಲ್ಲಿರವ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದು ಸಹ ಬಿಜೆಪಿ ನಾಯಕರ ಭರವಸೆ ನೀಡಿದ್ದರು. ಆದರೆ ಈ ವರೆಗೆ ಒಂದು ರೂಪಾಯಿ ಹಾಕಿಲ್ಲ. ಜನಧನ್ ಖಾತೆಗೆ ಸಹ ₹5,000 ಪ್ರಧಾನಿ ಹಾಕುತ್ತಾರೆ ಎಂದು ಹೇಳಿದ್ದರು. ಯಾರ ಖಾತೆಗೂ ಹಣ ಬಂದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.