ADVERTISEMENT

ನೀರು ಕುಡಿಯಲು ಪೂರ್ಣ ಯೋಗ್ಯ

ಆತಂಕಕ್ಕೆ ಒಳಗಾಗದಂತೆ ನಗರದ ಜನರಿಗೆ ಮೇಯರ್ ಮನವಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 5:36 IST
Last Updated 14 ಜನವರಿ 2017, 5:36 IST
ನೀರು ಕುಡಿಯಲು ಪೂರ್ಣ ಯೋಗ್ಯ
ನೀರು ಕುಡಿಯಲು ಪೂರ್ಣ ಯೋಗ್ಯ   
ಮಂಗಳೂರು: ನಗರಕ್ಕೆ ಪೂರೈಕೆಯಾ ಗುತ್ತಿರುವ ನೀರು ಕುಡಿಯಲು ಸಂಪೂರ್ಣ ಯೋಗ್ಯವಾಗಿದ್ದು, ಸಾರ್ವಜ ನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್‌ ಮನವಿ ಮಾಡಿದರು.
 
ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯಿದ್ದೀನ್ ಬಾವಾ, ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಲ್ಯಾನ್ಸಿ ಲಾಟ್ ಪಿಂಟೊ, ಕವಿತಾ ಸನಿಲ್‌, ಸಚೇತಕ ಶಶಿಧರ ಹೆಗ್ಡೆ ಮತ್ತು ಆಯುಕ್ತ ಮೊಹಮ್ಮದ್ ನಜೀರ್ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆ ಸಿದ ಮೇಯರ್‌, ‘ನಗರಕ್ಕೆ ಪೂರೈಕೆ ಯಾಗುತ್ತಿರುವ ಸಂಪೂರ್ಣ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಬಿಜೆಪಿ ಮುಖಂಡ ಜೆ.ಕೃಷ್ಣ ಪಾಲೇ ಮಾರ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ’ ಎಂದು ಹೇಳಿದರು.
 
ನಗರದ ವಿವಿಧೆಡೆ ನೀರು ಸಂಗ್ರಹಿಸಿ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿರುವುದಾಗಿ ಅವರು ಹೇಳಿದ್ದರು. ಆದರೆ, ಪಾಲಿಕೆಯ ವತಿಯಿಂದ 68 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಮೀನುಗಾರಿಕಾ ಕಾಲೇಜಿನ ಪ್ರಯೋ ಗಾಲಯ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗಾಲಯಕ್ಕೆ ಕಳುಹಿಸ ಲಾಗಿತ್ತು. 28 ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಶೇಕಡ 98ರಷ್ಟು ಕಡೆಗಳಲ್ಲಿ ನೀರಿನ ಗುಣಮಟ್ಟ ಉತ್ತಮವಾಗಿದೆ. ಶೇ 2ರಷ್ಟು ಕಡೆಗಳಲ್ಲಿ ಮಾತ್ರ ನೀರಿನಲ್ಲಿ ಕೋಲಿಫಾರ್ಮ್‌ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂದು ವರದಿಗಳನ್ನು ಪ್ರದರ್ಶಿಸಿದರು.
 
ತುಂಬೆ ಅಣೆಕಟ್ಟೆಯಿಂದ ನಗರಕ್ಕೆ ಎರಡು ಕೊಳವೆ ಮಾರ್ಗಗಳಲ್ಲಿ ಪ್ರತಿನಿತ್ಯ 36 ದಶಲಕ್ಷ ಗ್ಯಾಲನ್‌ ನೀರನ್ನು ಸರಬ ರಾಜು ಮಾಡಲಾಗುತ್ತಿದೆ. ವಿವಿಧ ಹಂತ ಗಳಲ್ಲಿ ಈ ನೀರನ್ನು ಶುದ್ಧೀಕರಿಸಿ ಕೊಳ ವೆಗಳ ಮೂಲಕ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ನೀರಿನ ಶುದ್ಧೀಕರಣ ಮತ್ತು ಕ್ಲೋರಿನ್‌ ಮಿಶ್ರಣ ಮಾಡುವ ಕುರಿತು ಎಚ್ಚರಿಕೆ ವಹಿಸಲಾಗಿದೆ. ತುಂಬೆಯ ಅಣೆಕಟ್ಟೆ ಅಥವಾ ಜಲ ಶುದ್ಧೀಕರಣ ಘಟಕಗ ಳಿಂದ ಪೂರೈಕೆಯಾಗುತ್ತಿರುವ ನೀರಿನಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.
 
ಮಹಾನಗರ ಪಾಲಿಕೆ ವ್ಯಾಪ್ತಿಯ ಆರು ಭಾಗಗಳಲ್ಲಿ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಈ ಎಲ್ಲಾ ಸ್ಥಳಗಳಲ್ಲಿ ಒಳಚರಂಡಿ ಕಾಮ ಗಾರಿ ಪ್ರಗತಿಯಲ್ಲಿತ್ತು. ಆಗ, ಕುಡಿಯುವ ನೀರಿನ ಕೊಳವೆ ತೂತಾಗಿ ಕೊಳಚೆ ನೀರು ಸೇರಿರುವ ಸಾಧ್ಯತೆ ಕಂಡು ಬಂದಿದೆ. ಈ ಎಲ್ಲಾ ಪ್ರದೇಶಗಳಲ್ಲಿ ಸೋರಿಕೆಯನ್ನು ಪತ್ತೆಮಾಡಿ, ದುರಸ್ತಿ ಮಾಡಲಾಗಿದೆ. ಸುಂಕದಕಟ್ಟೆಯಲ್ಲಿ ನಲ್ಲಿ ಸಮೀಪ ಸೋರಿಕೆ ಆಗುತ್ತಿದ್ದ ಕಾರಣ ದಿಂದ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
 
ಸುರತ್ಕಲ್‌ನ ಕೃಷ್ಣಾಪುರ ವಿಶ್ವನಾಥ ದೇವಸ್ಥಾನ, ಕಾಟಿಪಳ್ಳ– ಕೃಷ್ಣಾಪುರ ಎರಡನೇ ಬ್ಲಾಕ್‌ ಮಸೀದಿ, ಕೃಷ್ಣಾಪುರ ಏಳನೇ ಬ್ಲಾಕ್‌, ಪಡುಪದವು ಪ್ರದೇಶ ಗಳಲ್ಲಿ ಸಂಗ್ರಹಿಸಿದ್ದ ನೀರಿನ ಮಾದರಿ ಗಳಲ್ಲಿ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ. ಈ ಪ್ರದೇಶಗಳಲ್ಲಿ ಹಳೆಯ ಒಳಚರಂಡಿ ಕೊಳವೆ ಮಾರ್ಗ ಕುಸಿದು ಬಿದ್ದಿದ್ದು, ದುರಸ್ತಿ ಕಾಮಗಾರಿ ನಡೆಯು ತ್ತಿದೆ. ಅಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗದೊಳಕ್ಕೆ ಕೊಳಚೆ ನೀರು ಸೇರಿರುವ ಸಾಧ್ಯತೆ ಇದೆ. ಅಂತಹ ಎಲ್ಲಾ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
 
ನಗರಕ್ಕೆ ಪೂರೈಕೆಯಾಗುವ ನೀರನ್ನು ಪಾಲಿಕೆ ವತಿಯಿಂದ ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆ. ಈ ವಿಚಾರದಲ್ಲಿ ಜನರು ಭೀತಿಪಡುವ ಅಗತ್ಯವೇ ಇಲ್ಲ. ಅಂತಹ ಸಂಶಯಗಳಿದ್ದಲ್ಲಿ ಪಾಲಿಕೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0824–2220344/ 303/306 ಗಳಿಗೆ ಕರೆಮಾಡಿ ಮಾಹಿತಿ ನೀಡಬಹುದು. ತಕ್ಷಣವೇ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
 
ನಗರಕ್ಕೆ ಕೆಟ್ಟ ಹೆಸರು: ಶಾಸಕ ಜೆ.ಆರ್‌.ಲೋಬೊ ಮಾತನಾಡಿ, ‘ಕೃಷ್ಣ ಪಾಲೇಮಾರ್‌ರವರು ಮಾಜಿ ಸಚಿವರು, ಮಾಜಿ ಶಾಸಕರಾಗಿ ಕೆಲಸ ಮಾಡಿ ದ್ದವರು. ಅನಧಿಕೃತವಾಗಿ ನೀರಿನ ಪರೀಕ್ಷೆ ಮಾಡಿಸಿ ಪಡೆಯುವ ವರದಿಗಳಿಗೆ ಬೆಲೆ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅವರ ಹೇಳಿಕೆಯಿಂದ ಮಂಗಳೂರು ನಗರದ ವರ್ಚಸ್ಸಿಗೆ ಧಕ್ಕೆಯಾಗುವ ಅಪಾಯವಿದೆ. ಅಂತಹ ಹೇಳಿಕೆ ನೀಡುವ ಮೊದಲು ಅವರು ಯೋಚನೆ ಮಾಡಬೇಕಿತ್ತು’ ಎಂದು ಹೇಳಿದರು.
 
**
ಕಲುಷಿತ ನೀರು ಕೊಳವೆ ಮಾರ್ಗದ ಮೂಲಕ ಪೂರೈಕೆಯಾಗಿದ್ದರೆ ನಗರದಲ್ಲಿ ಸಾಂಕ್ರಾಮಿಕ ರೋಗ ಹಬ್ಬುತ್ತಿತ್ತು. ಅಂತಹ ಯಾವ ಪ್ರಕರಣಗಳೂ ವರದಿಯಾಗಿಲ್ಲ
-ಹರಿನಾಥ್,
ಮಂಗಳೂರು ಮಹಾನಗರ ಪಾಲಿಕೆ ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.