ADVERTISEMENT

ನೀರು ಕೇಳುವ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ: ಸ್ಥಳೀಯರಿಂದ ಥಳಿತ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:58 IST
Last Updated 20 ಏಪ್ರಿಲ್ 2017, 7:58 IST

ಸಿದ್ದಾಪುರ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ ಘಟನೆ ಬೆಳ್ವೆ ಪಂಚಾಯಿತಿ ವ್ಯಾಪ್ತಿಯ ಅಲ್ಬಾಡಿ ಮೂರುಕೈ ಎಂಬಲ್ಲಿ ನಡೆದಿದೆ.ಚೆನ್ನಗಿರಿ ಮೂಲದ ಭೀಮ ಚಾಟಿ ಎಂಬವನು ಎರಡು ದಿನಗಳ ಹಿಂದೆ ಅಲ್ಬಾಡಿ ಪರಿಸರದಲ್ಲಿ ದೇವಿ ಭಾವಚಿತ್ರ ಹಿಡಿದು ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ದೇವರ ಹೆಸರಿನಲ್ಲಿ ಭಿಕ್ಷೆ ಕೇಳುತ್ತಿರುವುದರಿಂದ ಗ್ರಾಮಸ್ಥರು ಬಿಡಿಗಾಸು ನೀಡಿ ಕಳುಹಿಸುತ್ತಿದ್ದರು. ಆದರೆ ಅಲ್ಬಾಡಿ ಜಲಜಾ ಕೊಠಾರ್ತಿ ಎಂಬ ವೃದ್ಧೆ ಮನೆಗೆ ತೆರಳಿದ ಈತ ಕುಡಿಯಲು ನೀರು ಕೇಳಿದ್ದನು.

ನೀರು ತರಲು ಮನೆಯೊಳಗೆ ತೆರಳಿದ್ದಾಗ ಈತ ಹಿಂದಿನಿಂದ ಬಂದು ವೃದ್ಧೆ ಮೇಲೆ ಹಲ್ಲೆ ನಡೆಸಿದ್ದನು. ಈ ಸಮಯದಲ್ಲಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದ ಜಲಜ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದ್ದರು.ಆದರೆ ಭೀಮ ಚಾಟಿ ಹಲ್ಲೆ ನಡೆಸಿದ ನಂತರ ಸ್ಥಳೀಯರಿಗೆ ಸಿಗದೆ ತಪ್ಪಿಸಿಕೊಂಡಿದ್ದ. ಬುಧವಾರ ಬೆಳಿಗ್ಗೆ ಬೆಳೆಂಜೆ ಪರಿಸರದಲ್ಲಿ ದೇವಿ ಭಾವಚಿತ್ರ ಹಿಡಿದು ಭಿಕ್ಷೆ ಬೇಡುತ್ತಿದ್ದವನನ್ನು ಹಿಡಿದು ಅಲ್ಬಾಡಿ ಕರೆ ತಂದಿದ್ದರು. ಆಕ್ರೋಶಗೊಂಡಿದ್ದ ಸ್ಥಳೀಯರು ಆತನನ್ನು ಅಲ್ಬಾಡಿ ಮೂರುಕೈ ಯಲ್ಲಿರುವ ವೃತ್ತಕ್ಕೆ ಕಟ್ಟಿಹಾಕಿ ಚೆನ್ನಾಗಿ ಥಳಿಸಿದ್ದರು.

ನಂತರ ಮುಂದಿನ ದಿನಗಳಲ್ಲಿ ಅಲ್ಬಾಡಿ ಪರಿಸರದಲ್ಲಿ ಭಿಕ್ಷೆ ಬೇಡುವಂತಿಲ್ಲ ಎಂದು ಎಚ್ಚರಿಸಿ ಆತನನ್ನು ಬಿಟ್ಟು ಕಳುಹಿಸಿದ್ದು, ಇನ್ನು ಮುಂದೆ ಭಿಕ್ಷಾಟನೆಗೆ ಗ್ರಾಮಕ್ಕೆ ಬರದಂತೆ ತಾಕೀತು ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.