ADVERTISEMENT

ಪುತ್ರ ವ್ಯಾಮೋಹ ಒಳ್ಳೆಯದಲ್ಲ: ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 11:20 IST
Last Updated 18 ಏಪ್ರಿಲ್ 2018, 11:20 IST

ಹೆಬ್ರಿ: ವೀರಪ್ಪ ಮೊಯಿಲಿ ಅವರು ಪುತ್ರ ವ್ಯಾಮೋಹ ಬಿಡಬೇಕು. ಪಕ್ಷದ ಎಲ್ಲರ ಒಮ್ಮತದ ಅಭ್ಯರ್ಥಿ ಮುನಿಯಾಲು ಉದಯಕುಮಾರ್‌ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟ್‌ ನೀಡುವಂತೆ ಬೆಂಗಳೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಜಪ್ತಿ ಸಂತೋಷ ಕುಮಾರ್ ಶೆಟ್ಟಿ ಮಂಗಳವಾರ ಒತ್ತಾಯ ಮಾಡಿದರು.

ಇದೇ ವೇಳೆ  ಉದಯ ಶೆಟ್ಟಿ ಅಭಿಮಾನಿ ಆಸೀಫ್ ಎಂಬುವರು ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ವೀರಪ್ಪ ಮೊಯಿಲಿ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗೆ ಸ್ಪಂದಿಸದೆ ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಗೆ ಟಿಕೆಟ್ ತಪ್ಪಿಸಿದ್ದಾರೆ. ಉದಯ ಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ನವೀನ್ ಅಡ್ಯಂತಾಯ ಹೇಳಿದರು.

ನಮ್ಮೇಲ್ಲರ ಒಮ್ಮತದ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರಿಗೆ ಟಿಕೆಟ್‌ ನೀಡಬೇಕು. ಅನ್ಯಾಯ ಮಾಡಿದರೆ ಉಡುಪಿ ಜಿಲ್ಲೆಯಾದ್ಯಾಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಪ್ರವೀಣ್ ಬಲ್ಲಾಳ್ ಎಚ್ಚರಿಕೆ ನೀಡಿದರು.

ADVERTISEMENT

ನಾಡ್ಪಾಲು ವೆಂಕಟೇಶ ಶೆಟ್ಟಿ , ರಂಗನಾಥ ಪೂಜಾರಿ ಮಾತನಾಡಿ, ಕಾರ್ಕಳ ಕ್ಷೇತ್ರದ 203 ಬೂತ್‍ಗಳ ಪೈಕಿ 190 ಬೂತ್‍ಗಳಲ್ಲಿ ಉದಯ ಕುಮಾರ್ ಶೆಟ್ಟಿ ಅವರು ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಇದನ್ನು ಉಲ್ಲಂಘನೆ ಮಾಡಿ ಟಿಕೆಟ್ ನೀಡದೇ ಇದ್ದಲ್ಲಿ ಕಾಂಗ್ರೆಸ್ ಬಿಟ್ಟು ಪಕ್ಷೇತರರಾಗಿ ಹೋರಾಟ ಮಾಡುತ್ತೇವೆ. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಲಿಕೊಡಬೇಡಿ ಎಂದ ಕಾಂಗ್ರೆಸ್ ಕಾರ್ಯಕರ್ತರು ಮೊಯಿಲಿ ಹಟಾವೋ ಕಾಂಗ್ರೆಸ್ ಬಚಾವೋ, ಎಂದು ಮೊಯಿಲಿ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಹೆಬ್ರಿ ಪಂಚಾಯಿತಿ ಮಾಜಿ ಅಧ್ಯಕ್ಷ ಗುಳಿಬೆಟ್ಟು ಸುರೇಶ್ ಶೆಟ್ಟಿ,ಪಕ್ಷದ ಪ್ರಮುಖರಾದ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಚಿರಂಜಿತ್ ಅಜಿಲ, ಜಗದೀಶ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ, ಬೇಳಂಜೆಯ ರೋಶನ್ ಕುಮಾರ್ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ,ಸೀತಾನದಿ ದೀರಜ್ ಶೆಟ್ಟಿ, ಗುಳ್ಕಾಡು ಭಾಸ್ಕರ ಶೆಟ್ಟಿ, ಕಾಂಗ್ರೆಸ್ ಮುಖಂಡ ಗೋಪಿನಾಥ್ ಭಟ್ ಮುನಿಯಾಲು, ಸೇರಿದಂತೆ ಪಕ್ಷದ ವಿವಿಧ ಪ್ರಮುಖರು ಭಾಗವಹಿಸಿದ್ದರು.

ಇನ್ನೂ ಸಮಯ ಇದೆ ಕಾಯೋಣ
ಪ್ರತಿಭಟನಾ ಸ್ಥಳಕ್ಕೆ ಬಂದ ಮುನಿಯಾಲು ಉದಯ ಶೆಟ್ಟಿ ಇನ್ನೂ ಸಮಯ ಇದೆ, ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಶಾಸಕರು ಜಯಗಳಿಸಬೇಕು ಎನ್ನುವ ಆಸೆಯಲ್ಲಿ ನಮ್ಮ ನಾಯಕ ವೀರಪ್ಪ ಮೊಯಿಲಿ ಮತ್ತು ಗೋಪಾಲ ಭಂಡಾರಿ ಅವರು ನನಗೆ ಟಿಕೆಟ್‌ ಕೊಡುವ ಬರವಸೆ ಇದೆ. ಯಾರೂ ನಿರಾಶರಾಗಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.