ADVERTISEMENT

ಬಸ್‌ ಸಂಚಾರ ಸ್ಥಗಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 10:22 IST
Last Updated 4 ಜುಲೈ 2017, 10:22 IST

ಉಡುಪಿ: ಉಡುಪಿ ನಗರದಿಂದ ಸಂಚರಿಸುವ 55 ಸಾರಿಗೆ ಬಸ್‌ಗಳ ಪರವಾನಗಿಯನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದ್ದರೂ, ಎಂದಿನಂತೆಯೇ ಬಸ್‌ ಸಂಚಾರ ನಡೆಸುತ್ತಿದೆ ಎಂದು ಆರೋಪಿಸಿ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಎಚ್.ಗುರುಮೂರ್ತಿ ಕುಲಕರ್ಣಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ನ್ಯಾಯಾಲಯದ ಆದೇಶ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ವಿಚಾರಣೆ ವೇಳೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಹೈಕೋರ್ಟಿನಲ್ಲಿ ಖುದ್ದು ಹಾಜರಿದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶವನ್ನು ತಲುಪಿಸಿದ್ದರೂ ಬಸ್ ಸಂಚಾರವನ್ನು ಸ್ಥಗಿತ ಮಾಡಿಲ್ಲ ಎಂದು ಸಂಘದ ಸದಸ್ಯರು ದೂರಿದರು.

ಬಸ್‌ಗಳ ಸಂಚಾರಕ್ಕೆ ತಡೆಯೊಡ್ಡಿ ಜೂನ್ 22ರಂದು ನ್ಯಾಯಮೂರ್ತಿ ಎಸ್. ಸುಜಾತಾ ನೇತೃತ್ವದ ಹೈಕೋರ್ಟ್ ಪೀಠ ಆದೇಶ ನೀಡಿತ್ತು. ಜೂನ್ 29ರಂದು ಸಾರಿಗೆ ಅಧಿಕಾರಿಗಳಿಗೆ ಅಧಿಕೃತ ಪತ್ರ ರವಾನೆಯಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ಹೇಳುತ್ತಾರೆ.  

ADVERTISEMENT

ಆದರೂ ಆದೇಶ ಪಾಲನೆಗೆ ಮೀನಮೇಷ ಎನಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾದರೆ ಸಾರಿಗೆ ಅಧಿಕಾರಿಗಳೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಉಡುಪಿ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿ ಲಾಡಿ ಸುರೇಶ್ ನಾಯಕ್, ಶಿವರಾಮ ಶೆಟ್ಟಿ, ವಿನಯ ಮೂರ್ತಿ, ಪ್ರವೀಣ್ ಶೆಟ್ಟಿ, ಸುರೇಶ್ ಕಲ್ಮಾಡಿ, ಇಬ್ರಾಹಿಂ ಮನ್ನಾರ್, ಹಮೀದ್, ಅಜಯ್ ರಾವ್, ಕಿರಣ್ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.