ADVERTISEMENT

ಬುಡಕಟ್ಟು ಜನರ ಔಷಧ ಜ್ಞಾನ ಬಳಸಿ

ಗಿಡಮೂಲಿಕೆ ಔಷಧ ಪದ್ದತಿ ವಿಚಾರಸಂಕಿರಣ– ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೀಲಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:37 IST
Last Updated 25 ಮೇ 2017, 5:37 IST
ಉಡುಪಿಯಲ್ಲಿ ನಡೆದ ಕೊರಗ ಮೂಲ ನಿವಾಸಿ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷಧ ಪದ್ದತಿ ಅನುಸರಣೆ ಕುರಿತ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ  ಉದ್ಘಾಟಿಸಿದರು.  ಪ್ರಜಾವಾಣಿ ಚಿತ್ರ
ಉಡುಪಿಯಲ್ಲಿ ನಡೆದ ಕೊರಗ ಮೂಲ ನಿವಾಸಿ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷಧ ಪದ್ದತಿ ಅನುಸರಣೆ ಕುರಿತ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಗಿಡಮೂಲಿಕೆ ಔಷಧಗಳಿಂದ ಮಾರಣಾಂತಿಕ ಕಾಯಿಲೆಗಳನ್ನು ಸಹ ಗುಣಪಡಿಸಲು ಸಾಧ್ಯವಿದ್ದು, ಅದರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಇಲಾಖೆ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೊರಗ ಮೂಲ ನಿವಾಸಿ ಬುಡಕಟ್ಟು ಸಮುದಾಯದ ಗಿಡಮೂಲಿಕೆ ಔಷಧ ಪದ್ದತಿ ಅನುಸರಣೆ ಕುರಿತ ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಔಷಧ ಪದ್ಧತಿಗಳಂತೆ ಗಿಡಮೂಲಿಕೆ ಔಷಧ ಪದ್ಧತಿ ಬಳಕೆಯಿಂದಲೂ ಯಾವುದೇ ಅಡ್ಡ ಪರಿಣಾಮ ಆಗದು. ಯುವಜನರು ಈ ಪದ್ಧತಿ ಬಗ್ಗೆ ಆಸಕ್ತಿ ತೋರಿದರೆ ಉತ್ತಮ ಆರೋಗ್ಯ ಹೊಂದಬಹುದು, ಆ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಈ ಪದ್ಧತಿಯ ಪರಿಪೂರ್ಣ ಮಾಹಿತಿ ಇಂದಿನವರಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಕಾಡು ಮತ್ತು ಗುಡ್ಡಗಾಡುಗಳಲ್ಲಿ ನೆಲಿಸಿರುವ ಆದಿವಾಸಿ ಸಮುದಾಯಗಳಿಗೆ ಗಿಡಮೂಲಿಕೆ ಔಷಧಗಳ ಬಳಕೆ ಪರಂಪರಾಗತವಾಗಿ ಒಲಿದಿದ್ದು, ಗಿಡಮೂಲಿಕೆಗಳು ದೊರೆಯುವ ಸ್ಥಳಗಳ ಬಗ್ಗೆ ಅವರಿಗೆ ನಿಖರವಾಗಿ ಗೊತ್ತಿದೆ. ಅವರ ಈ ಜ್ಞಾನವನ್ನು  ಬಳಸಿಕೊಳ್ಳಬೇಕಿದೆ. ಆದರೆ ಅದನ್ನು ಲಾಭದ ದೃಷ್ಟಿಯಿಂದ ವ್ಯಾಪಾರೀಕರಣ ಮಾಡಬಾರದು ಎಂದು ಅವರು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ,  ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಸವನಗೌಡ, ‘ರಾಜ್ಯದಲ್ಲಿ 50 ಬುಡಕಟ್ಟು ಸಮುದಾಯಗಳಿದ್ದು, ಅದರಲ್ಲಿ ಜೇನು ಕುರುಬ ಮತ್ತು ಕೊರಗರು ಮೂಲ ನಿವಾಸಿಗಳಾಗಿದ್ದಾರೆ.

ಈ ಸಮುದಾಯಗಳಲ್ಲಿ ಪರಂಪರಾಗತವಾಗಿ ಬಳಕೆಯಲ್ಲಿರುವ ಗಿಡಮೂಲಿಕೆ ಔಷಧಗಳ ಜ್ಞಾನ ಭಂಡಾರವನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಔಷಧಗಳ ಕುರಿತು ಹಾಗೂ ಸಮುದಾಯಗಳ ಈ ಪದ್ಧತಿಯನ್ನು ಉಳಿಸಿ ಬೆಳೆಸಲು ಹೆಚ್ಚಿನ ಸಂಶೋಧನೆ ನಡೆಸಬೇಕಿದೆ’ ಎಂದು ಹೇಳಿದರು. 

ಕಾಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮೃತ್ಯುಂಜಯ, ಕೊರಗ ಸಮುದಾಯದ ಬಾಬು ಪಾಂಗಾಳ, ಗಣೇಶ್ ಬಾರ್ಕೂರು, ಗೌರಿ, ಬೊಗ್ರ ಕೊರಗ ಹಾಗೂ ಗಣೇಶ್ ಕೊರಗ ಉಪಸ್ಥಿತರಿದ್ದರು.

*
ಪಾರಂಪರಿಕ ಔಷಧ ವಿಧಾನಗಳನ್ನು ಮೂಲ ನಿವಾಸಿಗಳಿಂದ ಅರಿತು ಅದರ ಪ್ರಯೋಜವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.
-ಪ್ರಿಯಾಂಕ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT