ADVERTISEMENT

ಬ್ರಹ್ಮಾವರ: 11ರಿಂದ ರಾಜ್ಯಮಟ್ಟದ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:45 IST
Last Updated 6 ನವೆಂಬರ್ 2017, 9:45 IST

ಉಡುಪಿ: ‘ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ ನವೆಂಬರ್‌ 11ರಿಂದ 13ರ ವರೆಗೆ ಬ್ರಹ್ಮಾವರ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮೀ ಬಿ. ನಾಯಕ್ ಹೇಳಿದರು.

ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳವರೆಗೆ ನಡೆಯುವ ಈ ಕ್ರೀಡಾಕೂಟದಲ್ಲಿ 32 ಜಿಲ್ಲೆಗಳಿಂದ ಸುಮಾರು 2,500 ಕ್ರೀಡಾಪಟುಗಳು ಪಾಲ್ಗೊಳ್ಳುವರು ಎಂದರು.

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು 40 ವಿವಿಧ ಸ್ಪರ್ಧೆಗಳು ನಡೆಯಲಿವೆ. ಈಗಾಗಲೇ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕ್ರೀಡಾಕೂಟದ ಯಶಸ್ವಿಗೆ 200 ಜನ ತಾಂತ್ರಿಕ ಅಧಿಕಾರಿಗಳು ಹಾಗೂ 200 ಜನ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ನವೆಂಬರ್ 11ರಂದು ಸಂಜೆ 4 ಗಂಟೆಗೆ ಕ್ರೀಡೆ ಮತ್ತು ಯುವ ಜನಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಧ್ವಜಾರೋಹಣ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ ಭಾಗವಹಿಸುವರು ಎಂದು ತಿಳಿಸಿದರು.

ಬ್ರಹ್ಮಾವರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐವಾನ್ ದೊನಾತ್ ಸುವಾರಿಸ್, ಕಾಲೇಜಿನ ಸಿಬಿಎಸ್‌ಇ ವಿಭಾಗದ ಕಾರ್ಯದರ್ಶಿ ಅನಿಲ್ ರೊಡಿಗ್ರಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶರತ ರಾವ್, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.