ADVERTISEMENT

ಮರಳುಗಾರಿಕೆಗೆ ತಡೆ, ಬಿಜೆಪಿಯ ಕೆಟ್ಟ ರಾಜಕಾರಣ: ಸಚಿವ ಪ್ರಮೋದ್ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 9:13 IST
Last Updated 2 ಸೆಪ್ಟೆಂಬರ್ 2017, 9:13 IST

ಉಡುಪಿ: ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಶುಕ್ರವಾರದಿಂದ ಪುನಃ ಆರಂಭವಾಗಿದೆ. ಸುದೀರ್ಘ ಅವಧಿಗೆ ಮರಳುಗಾರಿಕೆ ಬಂದ್ ಆಗಿದ್ದ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇತರ ಜಿಲ್ಲೆಗಳಿಂದ ಬರುವ ಮರಳಿನ ಬೆಲೆಯೂ ಗಗನಕ್ಕೇರಿದ್ದರಿಂದ ಮನೆ ನಿರ್ಮಾಣ, ರಿಪೇರಿ ಕಾರ್ಯವನ್ನು ಬಡವರು ಕೈಬಿಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಕರಾವಳಿ ನಿಯಂತ್ರಣ ವಲಯ ದಲ್ಲಿ ಮರಳುಗಾರಿಕೆಗೆ 22 ಪರ್ಮಿಟ್‌ಗಳನ್ನು ನೀಡಲಾಗಿದ್ದು, ಅವರೆಲ್ಲರೂ ಮರಳುಗಾರಿಕೆ ಪ್ರಾರಂಭಿಸಿ ರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಬಿಜೆಪಿ ವಿರುದ್ಧ ಆಕ್ರೋಶ: ‘ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೊಸದಾಗಿ ಪರ್ಮಿಟ್ ನೀಡುವ ಪ್ರಕ್ರಿಯೆಯನ್ನು ಬಹಳ ಹಿಂದೆಯೇ ಆರಂಭಿಸಲಾಗಿದೆ. ವಾರದ ಹಿಂದೆಯೇ 22 ಪರ್ಮಿಟ್‌ಗಳನ್ನು ನೀಡಲಾಗಿತ್ತು. ಆದರೆ ಆ ಎಲ್ಲರಿಗೂ ಮರಳುಗಾರಿಕ ಆರಂಭಿಸದಂತೆ ಬಿಜೆಪಿ ಮುಖಂಡರು ಬೆದರಿಕೆ ಹಾಕಿದ್ದರು. ಆದ್ದರಿಂದ ಆರಂಭವಾಗಿರಲಿಲ್ಲ. ಆದರೆ ಈಗ ಮರಳುಗಾರಿಕೆ ಆರಂಭವಾಗಿದೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮರಳಿಲ್ಲದೆ ಜನರು ಪರದಾಡುತ್ತಿದ್ದಾರೆ, ಜಿಲ್ಲೆಯ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಮರಳುಗಾರಿಕೆ ತಡೆಯುವ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯ ಜನರಿಗೆ ಕೇಡು ಮಾಡುತ್ತಿದ್ದಾರೆ. ಅವರು ಅಭಿವೃದ್ಧಿಯ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ಕರಾವಳಿ ನಿಯಂತ್ರಣ ವಲಯದಲ್ಲಿ ನಿಯಮ ಬಾಹಿರವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಕೆಲವರು ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಆದ್ದರಿಂದ ಸುಮಾರು ಒಂದು ವರ್ಷಗಳ ಕಾಲ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಕೆಲವು ನಿರ್ದೇಶನಗಳೊಂದಿಗೆ ಮರಳುಗಾರಿಕೆಗೆ ಪೀಠ ಆರು ತಿಂಗಳ ಹಿಂದೆ ಅನುಮತಿ ನೀಡಿತ್ತು. ಮಳೆಗಾಲ ಆರಂಭವಾದ ಕಾರಣ ಮರಳುಗಾರಿಕೆಗೆ ಚಾಲನೆ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.