ADVERTISEMENT

ಮರಳು ಸಮಸ್ಯೆ : ಪ್ರತಿಭಟನೆಯ ಎಚ್ಚರಿಕೆ:

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 7:15 IST
Last Updated 21 ಸೆಪ್ಟೆಂಬರ್ 2017, 7:15 IST

ಉಡುಪಿ: ‘ಮರಳುಗಾರಿಕೆ ಆರಂಭವಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಸಮಸ್ಯೆ ಮಾತ್ರ ಬಗೆಹರಿದಿಲ್ಲ ’ ಎಂದು ಬಿಜೆಪಿ ವಕ್ತಾರ ಕಟಪಾಡಿ ಶಂಕರ ಪೂಜಾರಿ ಆರೋಪಿಸಿದ್ದಾರೆ. ‘ಮರಳು ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕಾಗಿದ್ದು, ಆ ಗುತ್ತಿಗೆಯನ್ನು ಬೆಂಗಳೂರು ಮೂಲಕದ ಕಂಪೆನಿಗೆ ನೀಡಲಾಗಿದೆ. ಅವರು ದುಬಾರಿ ಬೆಲೆ ವಿಧಿಸುತ್ತಿರುವುದರಿಂದ ವಾಹನ ಮಾಲೀಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಹಿಂದೆ ಕೆಲವು ಲಾರಿ ಮತ್ತು ಟೆಂಪೊಗಳಿಗೆ ಮಂಗಳೂರು ಮೂಲದ ಕಂಪೆನಿ ಕಡಿಮೆ ಬೆಲೆಗೆ ಜಿಪಿಎಸ್ ಸಾಧನ ಅಳವಡಿಸಿತ್ತು. ಅದೇ ಜಿಪಿಎಸ್ ಬಳಸಲು ಅವಕಾಶ ನೀಡಬೇಕು. ಹೊಸದಾಗಿ ಅಳವಡಿಸುವವರಿಗೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ನಿಯಮಾನುಸಾರ ಮರಳುಗಾರಿಕೆಗೆ ಮತ್ತು ವಿತರಣೆಗೆ ಈಗಾಗಲೇ ಆದೇಶವಾಗಿದ್ದರೂ, ದೋಣಿಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ. ಮರಳು ಇಲ್ಲದೆ ತೊಂದರೆ ಅನುಭವಿಸಿದ್ದ ಜನರು ಇನ್ನೇನು ಮರಳು ಸಿಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಕೂಡಲೇ ಜಿಲ್ಲೆಯಲ್ಲಿ ನಿಯಮಾನುಸಾರ ಮರಳು ತೆಗೆಯುವ ಕೆಲಸವನ್ನು ಆರಂಭಿಸಬೇಕು. ಜನತೆಗೆ ನ್ಯಾಯಯುತ ದರದಲ್ಲಿ ಮರಳನ್ನು ವಿತರಿಸಬೇಕೆಂದು’ ಅವರು ಒತ್ತಾಯಿಸಿದ್ದಾರೆ.

ADVERTISEMENT

ಪ್ರತಿಭಟನೆ ಎಚ್ಚರಿಕೆ: ಮರಳು ಸಮಸ್ಯೆ ಇನ್ನೂ ಪರಿಹಾರವಾಗದ ಕಾರಣ ಜಿಲ್ಲೆಯ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈ ಕೂಡಲೇ ಸಮಸ್ಯೆ ಬಗೆಹರಿಸಿ ಮರಳು ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಕೀಲರಾದ ಎಚ್. ಆನಂದ ಮಡಿವಾಳ, ಗಂಗಾಧರ, ಹಾಗೂ ಎಚ್.ರಾಘವೇಂದ್ರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

‘ಮರಳು ಇಲ್ಲದೆ ಜಿಲ್ಲೆಯ ಹಲವು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕೂಲಿಕಾರರು, ಮರಗೆಲಸದವರು, ಕಾಂಕ್ರಿಟ್ ಹಾಕುವವರು, ಸೆಂಟ್ರಿಂಗ್ ಕಾರ್ಮಿಕರು ಕೆಲಸ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. 2014–15ರಲ್ಲಿ ಒಂದು ಯೂನಿಟ್ ಮರಳು ₹3,000 ಕ್ಕೆ ಸಿಗುತ್ತಿತ್ತು, ಈಗ ಅದರ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ’ ಎಂದಿದ್ದಾರೆ.
ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಆರೋಪದಲ್ಲಿ ತೊಡಗಿದ್ದು ಜನರ ಕಷ್ಟ ಕೇಳದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.