ADVERTISEMENT

ಮುಂಜಾಗೃತ ಕ್ರಮವಾಗಿ ಹಲವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:44 IST
Last Updated 15 ಸೆಪ್ಟೆಂಬರ್ 2017, 9:44 IST
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಗುರುವಾರ ಸಂಜೆ ಪ್ರತಿಭಟನೆಯ ಕೂತೂಹಲಕ್ಕಾಗಿ ಜಮಾಯಿಸಿದ್ದ ಜನಸ್ತೋಮ.
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಗುರುವಾರ ಸಂಜೆ ಪ್ರತಿಭಟನೆಯ ಕೂತೂಹಲಕ್ಕಾಗಿ ಜಮಾಯಿಸಿದ್ದ ಜನಸ್ತೋಮ.   

ಕುಂದಾಪುರ: ‘2 ದಿನಗಳ ಹಿಂದೆ ಕೋಟೇಶ್ವರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಂತರ ನಡೆದ ಬೆಳವಣಿಗೆಯಲ್ಲಿ ಕುಂದಾಪುರದ ಠಾಣಾಧಿಕಾರಿ ಏಕಪಕ್ಷೀಯ ನಡವಳಿಕೆ ತೋರಿದ್ದಾರೆ ಹಾಗೂ ಹಿಂದೂ ವಿರೋಧಿ ಧೋರಣೆ ತೋರುತ್ತಿದ್ದಾರೆ’ ಎಂದು ಆರೋಪಿಸಿ ಅವರ ವಿರುದ್ಧ ಗುರುವಾರ ಸಂಜೆ ಪ್ರತಿಭಟನೆ ನಡೆಸಬೇಕು ಎನ್ನುವ ವಾಟ್ಸ್‌ ಆ್ಯಪ್‌ ಸಂದೇಶದಿಂದ ಎಚ್ಚೆತ್ತ ಪೊಲೀಸ್‌ ಅಧಿಕಾರಿಗಳು ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿಭಟನೆ ಪರ ಹಾಗೂ ವಿರೋಧದ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್‌ ಇಲಾಖೆ ಗುರುವಾರ ಯಾವುದೇ ರೀತಿಯ ಪ್ರತಿಭಟನಾ ಸಭೆಗೂ ಅವಕಾಶ ಇಲ್ಲ ಎನ್ನುವುದನ್ನು ತಿಳಿಸಿತ್ತು ಹಾಗೂ ಪ್ರತಿಭಟನಾ ಸಭೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ಸಂಜೆಯ 4.30 ರ ಸುಮಾರಿಗೆ ಶಾಸ್ತ್ರಿ ಸರ್ಕಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನದಲ್ಲಿ ಬಂದಿದ್ದ ಕಾರ್ಯಕರ್ತರು ವಾಹನದಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡ ಖಾಕಿ ಪಡೆ, ನೇರವಾಗಿ ಠಾಣೆಗೆ ಕರೆತಂದಿತ್ತು. ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಹಾಗೂ ಬಿಜೆಪಿಯ ಪ್ರಮುಖರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಪೊಲೀಸರ ವಶದಲ್ಲಿರುವ ಕಾರ್ಯಕರ್ತರು ಪ್ರತಿಭಟನೆಗೆ ಬಂದವರಲ್ಲ, ಬೇರೆ ಕಾರಣದಿಂದ ನಗರಕ್ಕೆ ಬಂದವರು ಅವರನ್ನು ಬಿಡುಗಡೆ ಮಾಡಿ ಎನ್ನುವ ಮಾತುಗಳು ಕೇಳಿ ಬಂದವು.

ADVERTISEMENT

ಪ್ರತಿಭಟನೆಯ ನಡೆಯಬಹುದೋ, ಇಲ್ಲವೋ ಎನ್ನುವ ಕುತೂಹಲಕ್ಕಾಗಿ ಬಂದವರು ಹಾಗೂ ಬೆರಳೆಣಿಕೆಯ ಕಾರ್ಯಕರ್ತರನ್ನು ಹೊರತು ಪಡಿಸಿ ಉಳಿದವರು ಸ್ಥಳದಿಂದ ನಿರ್ಗಮಿಸಿದ ಕಾರಣದಿಂದಾಗಿ ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗಲಿಲ್ಲ. ಪೊಲೀಸ್‌, ಸಶಸ್ತ್ರ ಮೀಸಲು ಪಡೆ, ಕಾಯ್ದಿರಿಸಿದ ಪೊಲೀಸ್‌ ಪಡೆ, ಗೃಹ ರಕ್ಷಕ ದಳ ಸೇರಿದಂತೆ ಸುಮಾರು 200 ಸಿಬ್ಬಂದಿ ಬಂದೋ ಬಸ್ತ್‌ ಕಾರ್ಯದಲ್ಲಿ ಭಾಗಿಯಾಗಿದ್ದರು.

ನಗರಕ್ಕೆ ಬಂದಿದ್ದ ಜಿಲ್ಲಾ ಎಸ್‌.ಪಿ ಅವರು ಡಿವೈಎಸ್‌ಪಿ ಕಚೇರಿಯಲ್ಲಿ ಮೊಕ್ಕಾಂ ಹೂಡಿದ್ದರು. ಕುಂದಾಪುರದ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜಪ್ಪ ಹಾಗೂ ಎಸ್‌.ಐ ನಾಸೀರ್‌ ಹುಸೇನ್‌ ಬಂದೋ ಬಸ್ತ್‌ ನೇತೃತ್ವ ವಹಿಸಿದ್ದರು. ಪೊಲೀಸರ ವಶದಲ್ಲಿ ಇರಿಸಿದವರನ್ನು ಸಂಜೆ 6 ಗಂಟೆಯ ಬಳಿಕ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮಂಗಳೂರು, ‘ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಘಟನೆಯ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಬಂದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಕುಳ್ಳಿರಿಸುವುದು ಸರಿಯಲ್ಲ.

ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬೇಕು ಎನ್ನುವ ನಮ್ಮ ಸಹನೆ, ತಾಳ್ಮೆಯನ್ನು ಪರೀಕ್ಷೆ ಮಾಡುವುದು ಬೇಡ. ಇಲ್ಲಿ ರಾಜರ ಆಳ್ವಿಕೆ ಇದೆಯೋ, ಇಲ್ಲಾ ಪ್ರಜಾಪ್ರಭುತ್ವ ಇದೆಯೋ ಎನ್ನುವ ಸಂದೇಹ ಕಾಡುತ್ತಿದೆ’ ಎಂದು ಹೇಳಿದ ಅವರು, ಪ್ರಕರಣವನ್ನು ಎಸ್‌.ಪಿ ಯವರ ಗಮನಕ್ಕೆ ತರಲಾಗಿದ್ದು, ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕಿಶೋರಕುಮಾರ, ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಬಿಜೆಪಿ ಯುವ ಮೋರ್ಚಾದ ಮಹೇಶ್‌ ಪೂಜಾರಿ ಕೋಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಮೇಶ್‌ ಶೆಟ್ಟಿ, ಕೋಣಿ ಭಾಸ್ಕರ್‌ ಬಿಲ್ಲವ, ರೈತ ಸಂಘದ ದೀಪಕ್‌ಕುಮಾರ ಶೆಟ್ಟಿ ಬೈಂದೂರು, ಬಿಜೆಪಿ ಕ್ಷೇತ್ರ ಸಮಿತಿಯ ಕಾಡೂರು ಸುರೇಶ್‌ ಶೆಟ್ಟಿ, ಶಂಕರ ಅಂಕದಕಟ್ಟೆ, ನೇತೃತ್ವದಲ್ಲಿ ಬಿಡಿಸಿ ಕರೆತರಲಾಯಿತು. ಸುರೇಶ್ ಶೆಟ್ಟಿ ಕಾಡೂರು, ದೀಪಕ್ ಕುಮಾರ್ ಶೆಟ್ಟಿ, ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಪ್ರದೀಪ್‌ ಸಂಗಂ, ಸಂತೋಷ್‌ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.