ADVERTISEMENT

ಮುಂಡ್ಕೂರು: ಸಾಧಕ ಕ್ರೀಡಾಳುಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 9:03 IST
Last Updated 25 ನವೆಂಬರ್ 2014, 9:03 IST

ಕಾರ್ಕಳ: ಕ್ರೀಡಾಪಟುಗಳು ದೈಹಿಕ ಕ್ಷಮತೆಯ ಜತೆ ಮಾನಸಿಕವಾಗಿಯೂ ತಮ್ಮನ್ನು ಸಿದ್ಧಗೊಳಿಸಿಕೊಂಡಾಗ ಜೀವನ­ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಬೋಳ ಅಕ್ಷತಾ ಪೂಜಾರಿ ಹೇಳಿದರು.

ತಾಲ್ಲೂಕಿನ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾವ­ರ್ಧಕ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಕ್ರೀಡಾಪಟುಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಇನ್ನೊಬ್ಬ ಪವರ್ ಲಿಫ್ಟರ್ ವಿಜಯ ಕಾಂಚನ್ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನಾಗಿ ಸವಾಲಾಗಿ ಸ್ವೀಕರಿಸಬೇಕು. ಸ್ಪರ್ಧೆಯ ಸಂದರ್ಭ ಅಳುಕು ಅಂಜಿಕೆಯಿಲ್ಲದೆ ಭಾಗವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಮುಂಡ್ಕೂರು-ಕಡಂದಲೆ ಲಯನ್ಸ್  ಕ್ಲಬ್ ಹಾಗೂ ಮುಂಡ್ಕೂರು ಭಾರ್ಗವ ಜೇಸಿಐ ವತಿಯಿಂದ ಬೋಳ ಅಕ್ಷತಾ ಪೂಜಾರಿ ಮತ್ತು ವಿಜಯ ಕಾಂಚನ್ ಅವರನ್ನು ಅಭಿನಂದಿಸಲಾಯಿತು. ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸಂಚಾಲಕ ಡಾ.ಪಿ.ಬಾಲಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಶರತ್ ರಾವ್, ಪ್ರೌಢಶಾಲಾ ದೈಹಿಕ ಶಿಕ್ಷಕ ದಿನೇಶ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ಮಮತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಪೂಜಾರಿ, ಮಾಜಿಅಧ್ಯಕ್ಷ  ಕರುಣಾಕರ ಶೆಟ್ಟಿ, ಸದಸ್ಯ ಗುರುನಾಥ, ಲಯನ್ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಜೇಸಿಐ ಅಧ್ಯಕ್ಷ ವೆಂಕಟೇಶ ಪೂಜಾರಿ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಅತ್ಲೆಟಿಕ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪದವಿಪೂರ್ವ ಕಾಲೇಜಿನ ಕ್ರೀಡಾ ಪಟುಗಳಾದ ಶಬರೀಶ ಶೆಟ್ಟಿ,ಅಂಕುಶ್ ಶೆಟ್ಟಿ,ಸುಕೇಶ್,ಹಾಗೂ ನಿಶಾಂತ್‌ರನ್ನು ಗೌರವಿಸಲಾಯಿತು.
ಜೇಸಿಐನ ರಾಷ್ಟ್ರೀಯ ತರಬೇತುದಾರ ಪ್ರಭಾಕರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ವೆಂಕಟೇಶ ಪೂಜಾರಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಡಿ.5 ರಂದು ರಾಷ್ಟ್ರೀಯ ವಿಚಾರ ಸಂಕಿರಣ
ಉಡುಪಿ: ‘ಯಕೃತ್‌ ವಿಕಾರ; ರೋಗ ವಿನಿಶ್ಚಯ ಮತ್ತು ಚಿಕಿತ್ಸೆ’ ವಿಷಯ ಕುರಿತು ಕುತ್ಪಾಡಿ ಧರ್ಮಸ್ಥಳ ಮಂಜು­ನಾ­ಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಡಿ. 5 ಮತ್ತು 6ರಂದು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆ ಮಾಡುವರು. ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ. ಎಂ. ಶಾಂತಾ­ರಾಮ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗ­ಡೆಗೊಳಿಸುವರು. ಶಾಸಕ ಪ್ರಮೋದ್‌ ಮಧ್ವರಾಜ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸುವರು. ಸುಮಾರು ಸಾವಿರ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದ್ದು, 200 ಪ್ರಬಂಧಗಳು ಮಂಡನೆಯಾಗಲಿವೆ ಎಂದು ವಿಚಾರ ಸಂಕಿರಣದ ಮುಖ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ. ಪ್ರಸನ್ನ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿ.6ರಂದು ಸಂಜೆ ನಾಲ್ಕು ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ಸಚಿವ ವಿನಯ ಕುಮಾರ್‌ ಸೊರಗೆ ಆಗಮಿಸುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT