ADVERTISEMENT

ಮೂಲ್ಕಿ: ಅಜ್ಜಿ ಮನೆಯಿಂದ ಹೊರಟವರು ನೀರು ಪಾಲು

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:03 IST
Last Updated 10 ಜುಲೈ 2017, 9:03 IST

ಮೂಲ್ಕಿ/ಉಳ್ಳಾಲ: ಮೂಲ್ಕಿ ಬಳಿಯ ಮಟ್ಟು ಪ್ರದೇಶದಲ್ಲಿ ಶಾಂಭವಿ ನದಿಯಲ್ಲಿ ಮುಳುಗಿದ ಯುವಕರು, ಭಾನುವಾರ ಬೆಳಿಗ್ಗೆ ಅಜ್ಜಿ ಮನೆಯಿಂದ ಹೊರಟಿದ್ದರು. ಬೆಳಿಗ್ಗೆ ತಮ್ಮದೇ ವಯೋಮಾನದ ಸಂಬಂಧಿಕ ಹುಡುಗರೊಂದಿಗೆ ಕುತ್ತಾರು ಮುಂಡೋಳಿಯಲ್ಲಿರುವ ಅಜ್ಜಿ ಮನೆಯಿಂದ ಹೊರಟವರು ನೀರು ಪಾಲಾದರು.

ಮಳೆಗಾಲವಾದ್ದರಿಂದ ‘ದೂರ ಪ್ರಯಾಣ ಮಾಡಬೇಡಿ’ ಎಂದು ಮನೆಯವರು ನೀಡಿದ್ದ ಸೂಚನೆಯನ್ನೂ ಪಾಲಿಸದೇ ಇರುವುದು ಯುವಕರಿಗೆ ಮುಳುವಾಯಿತು. ಆದರೆ ತಾವು ಸ್ನೇಹಿತನ ಮನೆಗೆ ಹೋಗುತ್ತಿದ್ದೇವೆ ಎಂದು ಕಾರಿನಲ್ಲಿ ಐದು ಜನ ತೆರಳಿದ್ದರು.

ರಜಾದಿವನ್ನು ಕಳೆಯಲೆಂದು ಸ್ನೇಹಿತನ ಮನೆಗೆ ಬಂದಿದ್ದ 11ಜನರ ಯುವಕರ ತಂಡದಲ್ಲಿ ಮೂವರು ನೀರು ಪಾಲಾಗಿದ್ದು, ಉಳಿದವರು ಸ್ನೇಹಿತರನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ.

ADVERTISEMENT

ಸ್ನೇಹಿತ ಮೂಲ್ಕಿ ಮಟ್ಟುವಿನ ಮಹೇಶ್ ಮನೆಗೆ ಬಂದು ಊಟ ಮಾಡಿದ ಯುವಕರ ತಂಡ, ನದಿ ಬದಿಗೆ ವಿಹಾರಕ್ಕೆ ತೆರಳಿತ್ತು. ನದಿ ಬದಿಯಲ್ಲಿ ದೋಣಿಯಲ್ಲಿ ಕುಳಿತುಕೊಂಡವರಲ್ಲಿ ಕೆಲವರು ನೀರಿಗೆ ಧುಮುಕಿ ಈಜಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭ ಅಕ್ಷಿತ್ ಈಜಲಾಗದೆ ಬೊಬ್ಬೆ ಹಾಕಿದ. ಈ ಸಂದರ್ಭ ಅಕ್ಷತ್‌ನನ್ನು ರಕ್ಷಿಸಲು ಹೋದ ಕಿಶೋರ್ ಮತ್ತು ಅಕ್ಷತ್ ಮುಳುಗಲು ಆರಂಭಿಸಿದರು. ಇದನ್ನು ಕಂಡ ಮಹೇಶ್, ಈಜಿಕೊಂಡು ಹೋಗಿ ಅಕ್ಷತ್‌ನನ್ನು ರಕ್ಷಿಸಿದರು. ಉಳಿದ ಇಬ್ಬರಿಗಾಗಿ ಪುನಃ ಹೋಗಿ ರಕ್ಷಿಸಲು ಯತ್ನಿಸಿದ್ದು, ಈ ಸಂದರ್ಭ ಒಟ್ಟು ಮೂರು ಜನರೂ ನೀರು ಪಾಲಾದರು.

ಈ ಯುವಕರು ನೀರಿಗಿಳಿಯುದನ್ನು ಕಂಡ ಸ್ಥಳೀಯರು, ಅಪಾಯದ ಎಚ್ಚರಿಕೆಯನ್ನು ನೀಡಿದ್ದರು. ಸ್ಥಳೀಯ ಯುವಕರು ಹಾಗೂ ಮೀನುಗಾರರು ಬಲೆ ಹಾಗೂ ದೋಣಿಗಳ ಮೂಲಕ ಶಾಂಭವಿ ನದಿಯನ್ನೇ ಜಾಲಾಡಿ ಮೃತರ ಶವವನ್ನು ಮೇಲೆತ್ತಲು ಶ್ರಮಿಸಿದರು.  ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬದ ಆಧಾರ ಸ್ತಂಭ:  ನೀರಿನಲ್ಲಿ ಮುಳುಗಿ ಮೃತಪಟ್ಟ ಸೋಮೇಶ್ವರ ಕಿಶೋರ್‌, ತನ್ನ ಕುಟುಂಬಕ್ಕೆ ಆಧಾರವಾಗಿದ್ದರು. ಕಿಶೋರ್ ತಂದೆ ಜನಾರ್ದನ್‌ ಕಾರ್ಖಾನೆಯಲ್ಲಿ ಕೆಲಸ ಬಿಟ್ಟ ನಂತರ ಕೂಲಿ ಕೆಲಸ ಮಾಡು ತ್ತಿದ್ದಾರೆ. ಮನೆಗೆ ಆರ್ಥಿಕವಾಗಿ ಶಕ್ತಿಯಾಗಿದ್ದ ಕಿಶೋರ್ ಅಗಲುವಿಕೆಯಿಂದ ಕುಟುಂಬ ಅತಂತ್ರವಾಗಿದೆ.

ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಗ್ರಾಫಿಕ್ಸ್ ಡಿಸೈನ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್‌, ಸ್ಥಳೀಯ ರಕ್ತೇಶ್ವರೀ ಬಳಗದ ಸಕ್ರಿಯ ಸದಸ್ಯರಾಗಿದ್ದರು.

ಸೋಮೇಶ್ವರ ರಕ್ತೇಶ್ವರೀ ದೇವಸ್ಥಾನ ಬಳಿಯ ನಿವಾಸಿಯಾಗಿರುವ ಜನಾರ್ದನ್‌ ಪೂಜಾರಿ ಮತ್ತು ವಿಮಲ ಅವರ ಮೂವರು ಮಕ್ಕಳಲ್ಲಿ ಏಕೈಕ ಪುತ್ರ ಕಿಶೋರ್, ಅವಳಿ ಮಕ್ಕಳಲ್ಲಿ ಒಬ್ಬರಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಮಧೂರು ಬಾಲಕೃಷ್ಣ ಗಟ್ಟಿ ಮತ್ತು ಸರಸ್ವತಿ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಅಕ್ಷತ್ ಗಟ್ಟಿ ಮಧೂರು, ಗ್ರಾಫಿಕ್ಸ್ ಡಿಸೈನರ್‌ ಆಗಿ ಮಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅವಿವಾಹಿತರಾಗಿರುವ ಅಕ್ಷತ್ ಅವರಿಗೆ ಸಹೋದರ ಮತ್ತು ಸಹೋದರಿಯನ್ನು  ಇದ್ದಾರೆ. ಅಕ್ಷತ್ ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಅಕ್ಷತ್ ಮನೆಗೆ ಆಧಾರ ಸ್ತಂಭವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.