ADVERTISEMENT

ಯೋಜನೆಯ ಲಾಭ ಪಡೆದು ಉದ್ಯಮ ಪ್ರಾರಂಭಿಸಿ: ಸಾಹು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 12:01 IST
Last Updated 13 ಫೆಬ್ರುವರಿ 2017, 12:01 IST

ಉಡುಪಿ: ನಿರುದ್ಯೋಗ ದೇಶದ ಬಹು ದೊಡ್ಡ ಸಮಸ್ಯೆಯಾಗಿದ್ದು ಎಲ್ಲರಿಗೂ ಕೆಲಸ ನೀಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸಲು ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿ ತಾವೇ ಒಂದಿಷ್ಟು ಜನರಿಗೆ ಕೆಲಸ ನೀಡಲು ಪ್ರಯತ್ನಿಸಬೇಕು ಎಂದು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಅನದಿ ಚರಣ್ ಸಾಹು ಹೇಳಿದರು.

ಮಹಿಳಾ ಉದ್ಯಮಿಗಳ ವೇದಿಕೆ (ಪವರ್‌) ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪದವಿ ಪೂರೈಸುತ್ತಿದ್ದಾರೆ, ಆದರೆ ಇವರೆಲ್ಲರಿಗೂ ಉದ್ಯೋಗ ನೀಡುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಸರ್ಕಾರ ಮುದ್ರಾ, ನವೋದ್ಯಮ ಭಾರತ, ಕೌಶಲ ಭಾರತ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಮೂಲಕ ಸ್ವ ಉದ್ಯೋಗ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಉದ್ಯಮ ಆರಂಭಿಸಲು ಶೇ 9ರ ಬಡ್ಡಿ ದರದಲ್ಲಿ ಸರ್ಕಾರ ಸಾಲ ನೀಡುತ್ತಿದೆ. ಇಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಮಹಿಳಾ ಉದ್ಯಮಿಗಳು ಒಂದಾದರೆ ಯಾವುದೂ ಅಸಾಧ್ಯವಾಗಲಾರದು ಎಂದು ಅವರು ಹೇಳಿದರು. ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರಿದ್ದಾರೆ. ಆದರೆ, ರಾಷ್ಟ್ರದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಅವರ ಕೊಡುಗೆ ಏನು ಯೋಚಿಸಬೇಕು.

ಸಮೀಕ್ಷೆಯೊಂದರ ಪ್ರಕಾರ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಮಹಿಳೆಯರ ಪ್ರಮಾಣ ಕನಿಷ್ಠ ಶೇ 2ರಿಂದ ಗರಿಷ್ಠ ಶೇ40ರಷ್ಟಿದೆ. ಮಹಿಳೆಯರು ಹೆಚ್ಚಿನ ಕೊಡುಗೆ ನೀಡಿದರೆ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.

ಏಷ್ಯನ್‌ ಔದ್ಯಮಿಕ ಪ್ರೋತ್ಸಾಹ ಕೇಂದ್ರದ ವಿಶ್ವಸ್ಥ ನಿರ್ದೇಶಕಿ ಮಧುರಾ ಛತ್ರಪತಿ ಸಮ್ಮೇಳನ ಉದ್ಘಾಟಿಸಿದರು. ಔದ್ಯಮಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆಯ ಪ್ರಮಾಣ ಎಷ್ಟು ಎಂಬ ನಿಖರ ಅಂಕಿ– ಅಂಶ ಸಿಗುತ್ತಿಲ್ಲ. ಇದಕ್ಕಾಗಿ ಒಟ್ಟು 13 ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಪಾರ ಅವಕಾಶಗಳಿವೆ ಎಂದರು.

ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ಕೆ. ಎಸ್‌. ಹೆಗ್ಡೆ ಆಡಳಿತ ನಿರ್ವಹಣಾ ಸಂ ಸ್ಥೆಯ ಕಾರ್ಪೋರೇಟ್ ಕಾರ್ಯಕ್ರಮದ ಡೀನ್‌ ಡಾ. ಎ.ಪಿ. ಆಚಾರ್‌, ಪವರ್ ಸಂ ಸ್ಥೆಯ ಅಧ್ಯಕ್ಷೆ ಸರಿತಾ ಸಂತೋಷ್‌, ಕಾರ್ಯದರ್ಶಿ ಶ್ರುತಿ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT