ADVERTISEMENT

ರೈತನಾಗಿ ಪ್ರಶಸ್ತಿ ಪಡೆಯುವ ಹಂಬಲ

ಸಂದೇಶ ಪ್ರಶಸ್ತಿ ಸ್ವೀಕರಿಸಿ ನಟ ಪ್ರಕಾಶ್‌ ರಾಜ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 5:33 IST
Last Updated 14 ಜನವರಿ 2017, 5:33 IST
ಮಂಗಳೂರು: ‘ಒಳ್ಳೆಯ ಕಲಾವಿದ, ನಟ, ನಿರ್ದೇಶಕ, ನಿರ್ಮಾಪಕ ಎಂಬ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಒಳ್ಳೆಯ ರೈತ ಎಂಬ ಪ್ರಶಸ್ತಿಯನ್ನು ಈ ನೆಲದಲ್ಲಿ ನಿಂತು ಸ್ವೀಕರಿಸಬೇಕೆಂಬ ಹಂಬಲ ನನಗಿದೆ’ ಎಂದು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್‌ ರಾಜ್‌ ಹೇಳಿದರು.
 
ನಗರದ ನಂತೂರಿನಲ್ಲಿ ಸಂದೇಶ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ನಡೆದ ಸಮಾರಂಭದಲ್ಲಿ ‘ಸಂದೇಶ ಮಾಧ್ಯಮ ಪ್ರಶಸ್ತಿ– 2016’ ಸ್ವೀಕರಿಸಿ ಮಾತನಾಡಿದ ಅವರು, ‘ಈವರೆಗೆ ಕಲೆಯ ವಲಯದಲ್ಲಿ ಕೆಲಸ ಮಾಡಿ ಕೊಂಡು ಬಂದಿದ್ದೇನೆ. ಈಗ ರೈತನಾ ಗುವುದಕ್ಕೆ ಪ್ರಯತ್ನಿಸುತ್ತಿದ್ದೇನೆ. ಪ್ರಕಾಶ್‌ ರಾಜ್‌ ಫೌಂಡೇಷನ್‌ ಹೆಸರಿನಲ್ಲಿ ಹಳ್ಳಿ ಯೊಂದನ್ನು ದತ್ತು ಪಡೆದಿದ್ದೇನೆ. ಅಲ್ಲಿ ಕೃಷಿ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊ ಳ್ಳುತ್ತಿದ್ದೇನೆ. ಅದರಿಂದ ಅತೀವವಾದ ಸಂತೋಷ ದೊರೆಯುತ್ತಿದೆ’ ಎಂದು ಹೇಳಿದರು.
 
ಮರಗಳಂತೆ ಗಂಭೀರವಾಗಬೇಕು: ‘ಇತ್ತೀಚೆಗೆ ನಾನು ಕಾಡಿಗೆ ಹೋಗಿದ್ದೆ. ಅಲ್ಲಿ ಒಂದು ಮರವನ್ನು ನೋಡಿದೆ. ಅದರ ವಯಸ್ಸು ಅಂದಾಜು 50 ವರ್ಷ ದಾಟಿರಬಹುದು ಅನಿಸಿತು. ಆ ಮರದ ಗಾಂಭೀರ್ಯವನ್ನು ನೋಡಿ ದರೆ ಅದಕ್ಕೆ ಆದ ವಯಸ್ಸು ತಿಳಿಯು ವಂತಿತ್ತು. ಮನುಷ್ಯರಾದ ನಮಗೆ ಏಕೆ ಆ ಬಗೆಯ ಗಾಂಭೀರ್ಯ ಬರುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಾವು ಮರಗಳಂತೆ ಗಂಭೀರವಾಗಬೇಕು. ನಾವು, ನಮ್ಮ ಮಕ್ಕಳು ಒಳ್ಳೆಯ ಮರಗ ಳಾಗುವ ಪ್ರಯತ್ನ ಮಾಡಬೇಕು’ ಎಂದರು.
 
ದಿಗಂತಗಳಲ್ಲಿ ತಮಗೆ ನಂಬಿಕೆ ಇಲ್ಲ. ಪ್ರಯಾಣದಲ್ಲಿ ಮಾತ್ರ ನಂಬಿಕೆ ಇರುವುದು. ಹಾಗಾಗಿ ಹಳೆಯ ನೆನಪು ಗಳು ಅಷ್ಟಾಗಿ ಉಳಿಯುವುದಿಲ್ಲ. ಮುಂದಿನ ಪ್ರಯಾಣದ ಬಗ್ಗೆಯೇ ಹೆಚ್ಚು ಯೋಚನೆ. ಈ ಪ್ರಯಾಣ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬ ಊಹೆ ಯೂ ತಮಗೆ ಇಲ್ಲ ಎಂದು ಹೇಳಿದರು.
 
‘ನಾನು ಹುಟ್ಟುವ ಮೊದಲೇ ನಮ್ಮ ಕುಟುಂಬ ಮಂಗಳೂರು ತೊರೆದು ಬೆಂಗಳೂರು ಸೇರಿತ್ತು. ಆಗಾಗ ಶಾಲಾ ರಜೆಯ ದಿನಗಳು, ಹಬ್ಬ, ಜಾತ್ರೆ, ಕೌಟುಂಬಿಕ ಸಮಾರಂಭಕ್ಕೆ ಬಂದು ಹೋಗುತ್ತಿದ್ದೆವು. ಆದರೂ, ಇಲ್ಲಿಯ ನದಿ, ಸಮುದ್ರ, ಪರಿಸರ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆ. ಇಲ್ಲಿ ನಿಂತು ಗೌರವ ಸ್ವೀಕರಿಸುವಾಗ ನನ್ನ ಮನೆಯೊಳಗೆ ಗೌರವ ಪಡೆದಂತೆ ಭಾಸವಾಗುತ್ತದೆ’ ಎಂದು ಭಾವುಕ ರಾದರು.
 
‘ಸಂದೇಶ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಸಾಹಿತಿ ಕಮಲಾ ಹಂಪನಾ, ‘38 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತ ನಾಡಿದ್ದೆ. ಅಂದಿನಿಂದ ಮಾತನಾಡು ತ್ತಲೇ ಇದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಆ ದಿನ ತೋರಿದ ಪ್ರೀತಿ, ನೀಡಿದ ಧೈರ್ಯ ಇದಕ್ಕೆ ಕಾರಣ. ಸಂದೇಶ ಪ್ರಶಸ್ತಿಯ ಜವಾಬ್ದಾರಿಯನ್ನು ಅರಿತು ಸಾಹಿತ್ಯ ಕ್ಷೇತ್ರಕ್ಕೆ ಅದರ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.
 
ಶಿವಮೊಗ್ಗದ ಗಾಯಕ ‘ಸಂದೇಶ ಕಲಾ ಪ್ರಶಸ್ತಿ’, ಮಂಗಳೂರಿನ ಅನಿಲ್ ಪತ್ರಾವೊ ಅವರಿಗೆ ‘ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’, ಬೆಂಗಳೂರಿನ ಜಾನ್ ದೇವರಾಜ್‌ ಅವರಿಗೆ ‘ಸಂದೇಶ ವಿಶೇಷ ಪ್ರಶಸ್ತಿ’ ಮತ್ತು ಮಂಗಳೂರಿನ ಮದರ್‌ ತೆರೇಸಾ ಶಿಕ್ಷಣ ಸಂಸ್ಥೆಯ ಶಮಿತಾ ರಾವ್‌ ಮತ್ತು ರೆನಿಟಾ ಲೋಬೊ ಅವರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
 
ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್‌ ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ, ಶಾಸಕ ಜೆ.ಆರ್‌.ಲೋಬೊ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿಸೋಜ, ಮಂಗಳೂರು ಬಿಷಪ್‌ ಅಲೋಶಿಯಸ್‌ ಪಾವ್ಲ್‌ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಿಕ್ಟರ್ ವಿಜಯ್ ಲೋಬೊ, ಟ್ರಸ್ಟಿ ಐವನ್ ಪಿಂಟೊ ಉಪಸ್ಥಿತರಿದ್ದರು.
 
**
ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಕೃಷಿಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ.
-ಪ್ರಕಾಶ್‌ ರಾಜ್‌
ಬಹುಭಾಷಾ ಕಲಾವಿದ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.