ADVERTISEMENT

ವಿಕಾರಗಳಿಂದ ಮುಕ್ತರಾದಾಗ ಮುಕ್ತಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:00 IST
Last Updated 23 ಏಪ್ರಿಲ್ 2017, 10:00 IST

ಉಡುಪಿ: ‘ದೇಹ ರಥವು ಪಂಚೇಂದ್ರಿ ಯಗಳ ಉರುಳಿಗೆ ಸಿಕ್ಕರೆ ಬದುಕು ಸರಿಯಾದ ದಾರಿಯಲ್ಲಿ ಸಾಗದು, ಆದ್ದರಿಂದ ಇಂದ್ರೀಯ ನಿಗ್ರಹದ ಕಡೆಗೆ ಜನರು ಹೆಚ್ಚು ಗಮನ ನೀಡಬೇಕು’ ಎಂದು ಶ್ರೀ ಸಂಸ್ಥಾನ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪರ್ಯಾಯ ಪೇಜಾವರ ಮಠ ರಾಜಾಂಗಣದಲ್ಲಿ ಆಯೋಜಿಸಿದ್ದ ವಸಂತ ಸಂತ ಸಂದೇಶ ಮಾಲಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಉಪನ್ಯಾಸ ನೀಡಿದರು. ‘ಮನೋ, ಬುದ್ಧಿ ಹಾಗೂ ದೈಹಿಕ ವಿಕಾರಗಳು ಮುನಷ್ಯರನ್ನು ಕಾಡುತ್ತಿವೆ. ಇವುಗಳಿಂದ ಮುಕ್ತರಾದಾಗ ಮಾತ್ರ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಧರ್ಮ ಸ್ಥಳ, ಉಡುಪಿ ಶ್ರೀಕೃಷ್ಣ ಅಥವಾ ಯಾವುದೇ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದರೂ ವಿಕಾರಗಳಿಂದ ಮುಕ್ತರಾಗದ ಹೊರತು ಮುಕ್ತಿ ಸಿಗದು. ಮನುಷ್ಯನ ಅಂತರಂಗದಲ್ಲಿ ಪವಿತ್ರ ಶಕ್ತಿ ಇದ್ದು, ನಾವು ಬಾಹ್ಯ ನೋಟದ ಬದಲಾಗಿ ಅಂತರ ನೋಟದ ಕಡೆ ಗಮನ ನೀಡಬೇಕು. ಶೃಂಗಾರ ಬೇಡ ಎಂದು ಹೇಳುವುದಿಲ್ಲ, ಆದರೆ ಅದು ನಮ್ಮೊಳಗಿನ ಬೆಳಕನ್ನು ಇನ್ನಷ್ಟು ಪ್ರಜ್ವಲಿಸಲು ಸಹಾಯ ಮಾಡಬೇಕು’ ಎಂದು ಅವರು ಹೇಳಿದರು.

‘ದುರ್ಗುಣಗಳಿಗೆ ಬಲಿಯಾಗಿರುವ ಮನುಷ್ಯ ತನ್ನಲ್ಲಿ ಅಂತಃಶಕ್ತಿ ಇದೆ ಎನ್ನುವ ಅರಿವನ್ನು ಕಳೆದುಕೊಂಡಿದ್ದಾನೆ. ಅದಕ್ಕೆ ಆತ ದುಃಖದ ಮಡುವಿನಲ್ಲಿ ಬೀಳುತ್ತಿದ್ದಾನೆ. ಸುಖವನ್ನು ನಾವು ಹಣಕೊಟ್ಟು ಕೊಂಡುಕೊಳ್ಳಲಾಗದು, ಅದು ನಮ್ಮ ಅಂತರಂಗದಲ್ಲಿರುವ ನಿಧಿ ಯಾಗಿದ್ದು, ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದನ್ನು ಪಡೆ ಯುವಾಗ ಹಲವು ವಿಘ್ನಗಳು ಎದುರಾಗಬಹುದು.

ADVERTISEMENT

ಅವೆಲ್ಲವನ್ನೂ ಮೀರಿ ಮುಂದೆ ಸಾಗಬೇಕು. ಸದಾ ಒಳ್ಳೆಯದನ್ನು ಮಾಡುವ ಹಾಗೂ ಒಳ್ಳೆಯದನ್ನೇ ಮುಟ್ಟು ಕೈ ಅಮೃತ ಹಸ್ತವಾಗುತ್ತದೆ, ಇಲ್ಲವಾದರೆ ಮೃತ ಹಸ್ತವಾಗುತ್ತದೆ. ಕಿವಿ ಸಹ ಶಿವನಾಮ, ಸಂಗೀತ ಕೇಳಿ ಆನಂದಿಸಬೇಕು, ಕೇಳಬಾರದನ್ನು ಕೇಳಿದರೆ ಅದಕ್ಕೆ ಗೂಟ ಹೊಡೆಯಬೇಕು, ಮೂಗು ಸಹ ಭಕ್ತಿಯ ಸುವಾಸನೆ ಪಡೆಯಬೇಕು, ದುರ್ಗಂಧ ಪಡೆದರೆ ಎರಡೂ ಹೊಳ್ಳೆಯನ್ನು ಮುಚ್ಚಬೇಕು ಎಂದು ಶರಣರು ಹೇಳಿದ್ದಾರೆ’ ಎಂದು ಹೇಳಿದರು.

‘ಶರಣರು ಪಂಚೇಂದ್ರಿಯ ನಿಗ್ರಹದ ಮೂಲಕ ವ್ಯಕ್ತಿತ್ವ ಎತ್ತರಿಸಿಕೊಳ್ಳುವ ಕೆಲಸ ಮಾಡಿದರು, ನಾವು ಸಹ ಅಂತಹ ಪ್ರಯತ್ನ ಮಾಡಬೇಕು’ ಎಂದರು.ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಇದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.