ADVERTISEMENT

ವಿಚಾರ ಸಂಕಿರಣದ ಅನಿವಾರ್ಯತೆ– ವಿಷಾದ

ಅಸ್ಪೃಶ್ಯತೆ ನಿವಾರಣೆಗೆ ಮನಸ್ಸಿನಲ್ಲಿ ಶುದ್ಧತೆ ಬೇಕು: ಸಚಿವ ಪ್ರಮೋದ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:21 IST
Last Updated 4 ಮಾರ್ಚ್ 2017, 6:21 IST
ಉಡುಪಿಯಲ್ಲಿ ನಡೆದ ಪರಿಶಿಷ್ಟ ಜಾತಿ– ವರ್ಗಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮದಡಿ ಅಸ್ಪೃಶ್ಯತಾ ನಿವಾರಣಾ ಅರಿವು ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. -ಪ್ರಜಾವಾಣಿ ಚಿತ್ರ
ಉಡುಪಿಯಲ್ಲಿ ನಡೆದ ಪರಿಶಿಷ್ಟ ಜಾತಿ– ವರ್ಗಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮದಡಿ ಅಸ್ಪೃಶ್ಯತಾ ನಿವಾರಣಾ ಅರಿವು ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. -ಪ್ರಜಾವಾಣಿ ಚಿತ್ರ   

ಉಡುಪಿ: ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದ ನಂತರವೂ ನಾವು ಅಸ್ಪೃಶ್ಯತೆ ನಿವಾರಣೆ ಬಗ್ಗೆ ವಿಚಾರ ಸಂಕಿರಣ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿರುವುದು ದುಃಖದ ಸಂಗತಿ ಎಂದು ಮೀನುಗಾರಿಕೆ, ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ– ವರ್ಗಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮದಡಿ ಅಸ್ಪೃಶ್ಯತಾ ನಿವಾ ರಣಾ ಅರಿವು ಹಾಗೂ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಬಿ.ಆರ್‌. ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾದವರ ರಕ್ಷಣೆಗಾಗಿ ಸಂವಿಧಾನ ರಚಿಸಿದರೂ ಅಸ್ಪೃಶ್ಯತೆ ಇನ್ನೂ ನಿವಾರಣೆಯಾ ಗದಿರುವುದು ಈ ವ್ಯವಸ್ಥೆ ವಿಫಲವಾಗಿರು ವುದಕ್ಕೆ ಸಾಕ್ಷಿ ಎಂದು  ಹೇಳಿದರು.

ವಿದ್ಯಾವಂತರ ಜಿಲ್ಲೆ ಎಂದು ಹೆಸರು ಗಳಿಸಿರುವ ಉಡುಪಿಯಲ್ಲಿಯೂ ಅಸ್ಪೃ ಶ್ಯತೆ ಆಚರಣೆ ಹೋಗಿಲ್ಲ. ನನ್ನ ಕ್ಷೇತ್ರದಲ್ಲಿಯೇ ಮರಾಠಿ ಸಮಾಜದವರ ವಠಾರದಲ್ಲಿ ಸರ್ಕಾರದ ವತಿಯಿಂದ ಬಾವಿಯೊಂದನ್ನು ನಿರ್ಮಿಸಲಾಗಿದೆ. ಆದರೆ ಕೊರಗ ಸಮುದಾಯದವರಿಗೆ ಅಲ್ಲಿ ನೀರು ಪಡೆದುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಈ ವಿಷಯ ಗಮನಕ್ಕೆ ಬಂದ ನಂತರ ಯಾರೇ ನಿಷ್ಠುರವಾದರೂ ಪರವಾಗಿಲ್ಲ ಎಂದು ಕೊರಗರಿಗೆ ಬಾವಿಯಿಂದ ನೀರು ಪಡೆಯಲು ಅವಕಾಶ ಕಲ್ಪಿಸಿದೆ.

ಕೋಲ ಮುಂತಾದ ಧಾರ್ಮಿಕ ಆಚರಣೆಗಳು ನಡೆಯುವಾಗ ಸಹ ಕೊರಗರನ್ನು ದೂರ ನಿಲ್ಲಿಸಲಾಗುತ್ತಿದೆ. ಇವು ನೋವಿನ ಸಂಗತಿಗಳಾಗಿವೆ. ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿದರೆ ಮಾತ್ರ ಈ ವ್ಯವಸ್ಥೆ ಸರಿ ಹೋಗದು, ಎಲ್ಲರ ಹೃದಯಗಳು ಪರಿವರ್ತನೆ ಆಗಬೇಕು ಎಂದು ಅವರು ಹೇಳಿದರು.

ದಲಿತ ಸಮಾಜಕ್ಕೆ ಸೇರಿದ ಬಾಬು ಜಗಜೀವನ್‌ ರಾಂ ಅವರು ದೇಶದ ರಕ್ಷಣಾ ಸಚಿವರಾಗಿ ಸುದೀರ್ಘ ಅವಧಿಗೆ ಕೆಲಸ ಮಾಡಿದರು. ಮೊರಾರ್ಜಿ ದೇಸಾಯಿ ನಂತರ ಈ ದೇಶದ ಪ್ರಧಾನಿ ಆಗುವ ಅವಕಾಶ ಅವರಿಗಿತ್ತು, ಆದರೆ ದಲಿತರು ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸಲಾಯಿತು.

ಆದರೆ, ಅವರ ಮಗಳು ಮೀರಾ ಕುಮಾರಿ ಅವರನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ನೇಮಿಸಲಾಯಿತು. ದೇಶದ ಜನ ಸಂಖ್ಯೆಯಲ್ಲಿ ಶೇ25ರಷ್ಟು ಪರಿಶಿಷ್ಟ ಜಾತಿಯವರಿದ್ದಾರೆ, ಅವರಿಗೇ ನ್ಯಾಯ ಸಿಕ್ಕಿಲ್ಲ ಎಂದರೆ ಬೇರೆ ಯಾರಿಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಉಪ ಯೋಜನೆ ಕಾಯ್ದೆ  ಜಾರಿಗೆ ತಂದು ಒಟ್ಟು ಅನುದಾನದಲ್ಲಿ ಶೇ25ರಷ್ಟನ್ನು ಈ ವರ್ಗಕ್ಕೆ ಬಳಸಲು ಅವಕಾಶ ಕಲ್ಪಿಸಿದರು. ಅಧಿಕಾರಿಗಳು ಅನುದಾನ ಬಳಕೆಯಲ್ಲಿ ವಿಫಲರಾದರೆ ಶಿಕ್ಷೆ ವಿಧಿಸಲು ಸಹ ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌, ವಕೀಲರಾದ ಮಹಾ ಬಲ, ವಿ. ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಎನ್‌. ರಮೇಶ್ ಇದ್ದರು.

*
ಮೀಸಲಾತಿ ವಿರೋಧಿ ಸುವವರು ದಲಿತರ ಕಾಲೊನಿಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಬೇಕು. ಈಗಲೂ ಅವು ಮೂಲ ಸೌಕರ್ಯ ವಂಚಿತ ವಾಗಿವೆ.
-ಪ್ರಮೋದ್ ಮಧ್ವರಾಜ್‌,
ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.