ADVERTISEMENT

ಸಾಣೂರಿನಲ್ಲಿ ಸಂಭ್ರಮದ `ಆಟಿಡೊಂಜಿ ದಿನ'

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 9:46 IST
Last Updated 6 ಆಗಸ್ಟ್ 2013, 9:46 IST

ಕಾರ್ಕಳ: ತಾಲ್ಲೂಕಿನ ಸಾಣೂರು ಅಣ್ಣಪ್ಪ ಸ್ವಾಮಿ ಸ್ವಸಹಾಯ ಸಂಘ ಮತ್ತು ಪೃಥ್ವಿ ಯುವ ಸಂಘದ ವತಿಯಿಂದ 3ನೇ ವರ್ಷದ ಆಟಿಡೊಂಜಿ ದಿನ `ಆಟಿದ ಗೊಬ್ಬುಲು-2013' ಕಾರ್ಯಕ್ರಮ ಸಾಣೂರು ದುಗ್ಗ ಬೊಟ್ಟುವಿನ ಕೆಸರಿನ ಗದ್ದೆಯಲ್ಲಿ ಭಾನುವಾರ ನಡೆಯಿತು.

ಕಂಬಳವನ್ನೂ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತುಳುನಾಡಿನ ಜನಪದ, ಸಂಸ್ಕೃತಿ, ಕಲೆ, ಕ್ರೀಡೆಗಳನ್ನು ನಡೆಸಲಾಯಿತು. ಅಡಿಕೆ ಹಾಳೆಯ ಆಟ, ಕೆಸರು ಗದ್ದೆಯಲ್ಲಿ ಓಟ, ಕುದುರೆ ಗಾಡಿಯ ಓಟ, ಹಗ್ಗ-ಜಗ್ಗಾಟ, ಬಂಡಿ ಕಟ್ಟುವುದು, ಉಪ್ಪುಮುಡಿ, ಕಂಬಳದ ಓಟ, ಪಲ್ಲದ ಓಟ, ತಪ್ಪಂಗಾಯಿ, ಗಿರ್‌ಗೀಟಿಯ ಓಟ ಸೇರಿದಂತೆ ತುಳುನಾಡಿನ ಹಲವು ಕ್ರೀಡೆಗಳಲ್ಲಿ ಯುವಕರು ಭಾಗವಹಿಸಿ ಸಂಭ್ರಮಿಸಿದರು.

ತುಳುನಾಡಿನ ಜನರು ನಿತ್ಯ ಬಳಸುತ್ತಿದ್ದ ಪರಿಕರಗಳು, ಕಂಬಳದ ಕೋಣಗಳು, ಅಂಕದ ಕೋಳಿ, ವಿಳ್ಯ -ತಾಂಬೂಲ, ಅಕ್ಕಿಮುಡಿ, ಬುಟ್ಟಿ ಹೆಣೆಯುವುದು, ಬಚ್ಚಲ ಕೋಣೆಯ ಪ್ರತಿರೂಪಗಳ ಪ್ರದರ್ಶನ ಹಾಗೂ ತುಳುಭಾಷೆಯ ಸಂಭಾಷಣೆಗಳು ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿದವು. ಈ ಪ್ರದರ್ಶನ ಜನ ಮಾನಸವನ್ನು ಗತಕಾಲಕ್ಕೆ ಮರುಳಿಸುವಂತೆ ಮಾಡಿತು.

ಸಾಣೂರು ದೆಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರುಗುತ್ತು ಪಠೇಲ್ ಸತೀಶ್ ಶೆಟ್ಟಿ, ಮಾಲಿನಿ ರೈ, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಎಸ್. ಕೋಟ್ಯಾನ್, ಮಧುಸೂಧನ್ ರೈ, ಪೃಥ್ವಿ ಯುವ ಬಾಂಧವೆರ್‌ನ ಅಧ್ಯಕ್ಷ ಅರುಣ್ ಡಿಸಿಲ್ವ, ಅಣ್ಣಪ್ಪ ಸ್ವಾಮಿ ಸ್ವ-ಸಹಾಯ ಸಂಘದ ಮಹೇಶ್, ವಿಶ್ವನಾಥ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬೆಳ್ವಾಯಿ ಘಟಕದ ಮುಖ್ಯಸ್ಥೆ ಸವಿತಾ, ಸೇವಾನಿರತೆ ಅರುಣಿ, ಕೃಷಿಕರಾದ ವಾರಿಜಾ ಶೆಡ್ತಿ, ತೀರ್ಥಲ್ಲ ವಾಸು ಶೆಟ್ಟಿ, ಚಂದ್ರಶೇಖರ್ ಪೂಜಾರಿ ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT