ADVERTISEMENT

ಸಾಸ್ತಾನ ಅಂಗಡಿ ಕೋಣೆ ತೆರವು

ನ್ಯಾಯಾಲಯದ ಆದೇಶ: ಪೊಲೀಸ್‌ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:18 IST
Last Updated 21 ಜುಲೈ 2017, 6:18 IST

ಸಾಸ್ತಾನ(ಬ್ರಹ್ಮಾವರ) : ಸಾಸ್ತಾನ ಮೀನು ಮಾರುಕಟ್ಟೆ ಪಕ್ಕದ ಅಂಗಡಿ ಕೋಣೆಗಳನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರು ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿದರು.

ಅಂಗಡಿ ಕೋಣೆ ತೆರವು ವಿಚಾರವಾಗಿ ಈ ಹಿಂದೆಯೇ ಅಂಗಡಿ ಮಾಲೀಕರು ಮತ್ತು ಐರೋಡಿ ಗ್ರಾಮ ಪಂಚಾಯಿತಿ ನಡುವೆ ವಿರೋಧ ವ್ಯಕ್ತವಾಗಿ ನ್ಯಾಯ ತೀರ್ಮಾನಕ್ಕಾಗಿ ಕೆಲವು ಅಂಗಡಿ ಮಾಲೀಕರು ನ್ಯಾಯಾ ಲಯದ ಮೊರೆ ಹೋಗಿದ್ದರು.

ಹಳೆಯ ದಾದ ಸಾಸ್ತಾನ ಮೀನು ಮಾರುಕಟ್ಟೆ‌ಯನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ ಐರೋಡಿ ಗ್ರಾಮ ಪಂಚಾಯಿತಿ ಕರಾವಳಿ ಅಭಿವೃದ್ಥಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರಿಂದ  ₹ 2ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಮೀನು ಮಾರುಕಟ್ಟೆಗೆತಾಗಿ ಕೊಂಡಿರುವ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಿಸಲು ಐರೋಡಿ ಗ್ರಾಮ ಪಂಚಾಯಿತಿ ನಿರ್ಣಯ ಮಾಡಿತ್ತು, ಇದನ್ನು ಅಂಗಡಿ ಮಾಲೀ‌ಕರು ವಿರೋಧಿಸಿದ್ದರು.

ADVERTISEMENT

ಈ ಪ್ರಕರಣ ಕುಂದಾಪುರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತು ನ್ಯಾಯಾಲಯವು ವಿಚಾರಣೆ ನಡೆಸಿ ಗ್ರಾಮ ಪಂಚಾಯಿತಿ ಪರವಾದ ತೀರ್ಪು ನೀಡಿತ್ತು.

ಗುರುವಾರ ಗ್ರಾಮ ಪಂಚಾಯಿತಿ ಆಡಳಿತ, ಪೊಲೀಸ್ ಭದ್ರತೆಯಲ್ಲಿ ಅಂಗಡಿ ಕೋಣೆಗಳನ್ನು ತೆರವುಗೊಳಿಸಲು ಮುಂದಾದಾಗ, ಅಂಗಡಿ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ಪ್ರಕರಣದ ಕುರಿತು ಹೈಕೋರ್ಟ್‌ ಮೊರೆ ಹೋಗಿದ್ದು 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು.

ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿರುವ ಕಾರಣ ಹೆಚ್ಚಿನ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಾದಿಸಿತು. ಅಂಗಡಿ ಮಾಲೀಕರ ಪರವಾಗಿ ವಕೀಲರು ಸ್ಥಳಕ್ಕೆ ಬಂದು ಸಂಧಾನಕ್ಕೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 

ಸ್ಥಳಕ್ಕೆ ಬಂದ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಅವರು ತಾಲ್ಲೂಕು ಪಂಚಾಯಿತಿ ಆದೇಶದಂತೆ ಅಂಗಡಿ ತೆರವಿಗೆ ಸೂಚಿಸಿ ಅಂಗಡಿ ತೆರವು ಕಾರ್ಯ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.