ADVERTISEMENT

‘ಸಿಸಿಟಿವಿ: ಮಕ್ಕಳ ಮುಕ್ತ ವಾತಾವರಣಕ್ಕೆ ಧಕ್ಕೆ’

ಮಕ್ಕಳ ರಕ್ಷಣಾ ನೀತಿಯ ಕಾರ್ಯಾಗಾರದಲ್ಲಿ ಸುಮಿತ್ರಾ ರಾವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:52 IST
Last Updated 17 ಜನವರಿ 2017, 8:52 IST
‘ಸಿಸಿಟಿವಿ: ಮಕ್ಕಳ ಮುಕ್ತ ವಾತಾವರಣಕ್ಕೆ ಧಕ್ಕೆ’
‘ಸಿಸಿಟಿವಿ: ಮಕ್ಕಳ ಮುಕ್ತ ವಾತಾವರಣಕ್ಕೆ ಧಕ್ಕೆ’   

ಮಂಗಳೂರು: ತರಗತಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವುದರಿಂದ ಮಕ್ಕಳಿಗೆ ಸಿಗಬೇಕಾದ ಮುಕ್ತವಾದ ವಾತಾವರಣ ಲಭಿಸುವುದಿಲ್ಲ ಎಂಬ ಆರೋಪಗಳಿವೆ. ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಯುನಿಸೆಫ್‌ ಶಿಕ್ಷಣ ಮತ್ತು ಮಕ್ಕಳ ಸಂರಕ್ಷಣೆಯ ಸಲಹಾ ಪ್ರತಿನಿಧಿ, ಬೆಂಗಳೂರಿನ ಸುಚಿತ್ರ ರಾವ್‌ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಬಗ್ಗೆ ಜಿಲ್ಲಾ ಸಮಿತಿಯ ಸದಸ್ಯರಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಗಳಿಗೆ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳು ತಮ್ಮ ಎಳೆವಯಸ್ಸಿನಲ್ಲಿ ಏನೆಲ್ಲಾ ತುಂಟಾಟಗಳನ್ನು ಮಾಡ ಬೇಕೋ, ಅದನ್ನು ಆಯಾ ವಯಸ್ಸಿನಲ್ಲಿ ಮಾಡಬೇಕು. ಆದ್ದರಿಂದ ಯಾರೋ ನಮ್ಮನ್ನು ನೋಡುತ್ತಲೇ ಇರುತ್ತಾರೆ ಎಂಬ ಭಾವನೆಯಿಂದ ಅವರು ದಿನ ವಿಡೀ ವ್ಯವಹರಿಸುವುದು ಸರಿಯಲ್ಲ ಎಂಬ ದೃಷ್ಟಿಕೋನವೂ ಇದೆ. ಆದ್ದರಿಂದ ಸಿಸಿಟಿವಿ ಆಳವಡಿಕೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದರು.

ಮಕ್ಕಳ ರಕ್ಷಣಾ ನೀತಿಯನ್ನು ಸಮಗ್ರವಾಗಿ ರೂಪಿಸಿರುವ ಹೆಗ್ಗಳಿಕೆ ದೇಶದಲ್ಲಿಯೇ ಕರ್ನಾಟಕ ರಾಜ್ಯಕ್ಕೆ ಸಲ್ಲಬೇಕಾಗುತ್ತದೆ. ಇತರ ರಾಜ್ಯಗಳೂ ಕರ್ನಾಟಕದಿಂದ ಸಲಹೆಗಳನ್ನು ಕೇಳು ತ್ತಿವೆ. ಈ ನೀತಿಯ ಯಶಸ್ವಿ ಜಾರಿಗೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರವಲ್ಲದೆ, ಇಡೀ ಸಮಾಜವೇ ಪ್ರಯತ್ನಿಸಬೇಕು. ಶಿಕ್ಷಣ ಸಂಸ್ಥೆಗಳು, ಆಶ್ರಮ ಶಾಲೆಗಳು, ಮದ ರಸಗಳು, ವಸತಿಯುತ ಕೋಚಿಂಗ್‌ ಸೆಂಟರ್‌ಗಳು ಕೂಡ ಈ ಮಕ್ಕಳ ರಕ್ಷಣಾ ನೀತಿಯ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಹೇಳಿದರು.

ಯುನಿಸೆಫ್‌ ಮಕ್ಕಳ ಸಂರಕ್ಷಣಾ ಘಟಕದ ಪ್ರಾದೇಶಿಕ ಸಂಯೋಜಕ ಕೆ. ರಾಘವೇಂದ್ರ ಭಟ್‌ ಮಾತನಾಡಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಹೆಚ್ಚೇನೂ ಪ್ರಗತಿ ಸಾಧಿಸಿಲ್ಲ. ಕೇವಲ ಆರ್ಥಿಕ ನೆರವು ನೀಡಿದ ತಕ್ಷಣ ಮಾನವ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳ ಬೇಕು. ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿ 68 ಸೂಚ್ಯಂಕಗಳನ್ನು ಗುರುತಿಸಲಾಗಿದೆ. ಮುಂದುವರಿದ ಜಿಲ್ಲೆ ಎಂದು ಗುರುತಿ ಸಿಕೊಂಡ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಈ ಅಭಿವೃದ್ಧಿ ಸೂಚ್ಯಂಕ 68 ದಾಟಿಲ್ಲ ಎಂದು ಅವರು ಹೇಳಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವಿವಾಹದಂತಹ ಘಟನೆ ಗಳು ಶಿಕ್ಷಿತ ಸಮಾಜದಲ್ಲಿ ಕಡಿಮೆ ಯೇನೂ ಆಗಿಲ್ಲ. ಇನ್ನೂ ಇಂತಹ ಪಿಡು ಗುಗಳನ್ನು ಅಳಿಸಿ ಹಾಕುವುದು ಸಾಧ್ಯ ವಾಗಿಲ್ಲ ಎಂಬ ವಾಸ್ತವ ಅಂಶವನ್ನು ಒಪ್ಪಿಕೊಂಡು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖೇಶ್‌ ಶೆಟ್ಟಿ, ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.