ADVERTISEMENT

ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಕೊಡುಗೆಯೇನು?

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 10:30 IST
Last Updated 20 ನವೆಂಬರ್ 2017, 10:30 IST

ಕಾಪು (ಪಡುಬಿದ್ರಿ): ‘ನಮ್ಮ ದೇಶಕ್ಕೆ ಗಾಂಧಿ ಕುಟುಂಬ ಏನನ್ನು ನೀಡಿದೆ ಎಂದು ಪ್ರಶ್ನಿಸುವ ಬಿಜೆಪಿಗರು, ದೇಶದ ಸ್ವಾತಂತ್ರ್ಯಕ್ಕಾಗಿ ತಾವೇನು ನೀಡಿದ್ದೇವೆ ಎನ್ನುವುದರ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಕಾಪು ರಾಜೀವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಇಂದಿರಮ್ಮ - 100 ದೀಪ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಕಂಡ ಅದ್ಭುತ ಮತ್ತು ಪರಮೋಚ್ಛ ನಾಯಕಿಯಾಗಿರುವ ಇಂದಿರಾ ಗಾಂಧಿ ಅವರು ಬಡತನ ನಿವಾರಣೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ಬ್ಯಾಂಕ್ ಕ್ಷೇತ್ರದ ಅವತರಣಿಕೆ ಸಹಿತ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ನಡೆಸಿರುವ ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿವೆ. ಅಧಿಕಾರದಲ್ಲಿರುವಷ್ಟು ಕಾಲ ದೇಶದ ಅಭಿವೃದ್ಧಿ ಕುರಿತಾಗಿಯೇ ಚಿಂತಿಸಿದ ಅವರ ಚಿಂತನೆಗಳು ಇಂದಿಗೂ ಅನುಕರಣೀಯವಾಗಿದೆ ಎಂದು ನುಡಿದರು.

ADVERTISEMENT

ಪಕ್ಷದ ಮುಖಂಡ ಅಮೃತ್ ಶೆಣೈ ಮಾತನಾಡಿ, ‘ಇಂದಿರಾ ಗಾಂಧಿಯವರ ಸ್ಮರಣೆ ಇಂದು ಅವಶ್ಯಕತೆಯಾಗಿದೆ. ದೇಶವನ್ನು ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ಮೂಡಿಸುವಲ್ಲಿ ಶ್ರಮಿಸಿದ ಇಂದಿರಾ ಗಾಂಧಿ ಅವರನ್ನು ಕೇವಲವಾಗಿ ಕಾಣುವ ಪ್ರಯತ್ನ ಇಂದಿನ ಆಡಳಿತಾರೂಢ ರಾಜಕಾರಣಿಗಳಿಂದ ನಡೆಯುತ್ತಿರುವುದು ಅತ್ಯಂತ ಖೇದಕರವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಜನಾಂದೋಲನ ನಡೆಸಬೇಕು’ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್, ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ವಿನಯ ಬಲ್ಲಾಳ್, ವೈ. ಸುಕುಮಾರ್, ರಾಜೇಶ್ ರಾವ್ ಪಾಂಗಾಳ, ಹರೀಶ್ ಶೆಟ್ಟಿ ಪಾಂಗಾಳ, ಗೋಪಾಲ್ ಪೂಜಾರಿ ಪಲಿಮಾರು, ದೀಪಕ್ ಕುಮಾರ್ ಎರ್ಮಾಳು, ಮೆಲ್ವಿನ್ ಡಿ ಸೋಜ, ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು.

ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ
ಹೆಬ್ರಿ: ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವದ ಸವಿನೆನಪಿಗಾಗಿ ಭಾನುವಾರ ಹೆಬ್ರಿಯ ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ದೀಪ ನಮನ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ಕಾಋ್ಯಕ್ರಮ ಚಾಲನೆ ನೀಡಿದರು. ನೂರು ದೀಪ ಹಚ್ಚಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಲಾಯಿತು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಎಚ್.ಜಯಕರ ಪೂಜಾರಿ, ಪ್ರಮುಖರಾದ ಎಚ್. ಜನಾರ್ದನ್, ಸುಂದರ ಪೂಜಾರಿ, ಶರಣಪ್ರಸಾದ, ಸಂಜೀವ ನಾಯ್ಕ್, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಮಹಿಳಾ ಕಾಂಗ್ರೆಸ್ ಪ್ರಮುಖರಾದ ಅಜೆಕಾರು ಯಶೋಧ ಶೆಟ್ಟಿ, ಇಂದಿರಾ ನಾಯ್ಕ್, ಶಶಿಕಲಾ ಆರ್.ಪಿ, ಗಾಯತ್ರಿ ಆಚಾರ್ಯ, ಕೊರಪೊಳು ಪಡುಕುಡೂರು, ಮುದ್ರಾಡಿ ಜಯಲಕ್ಷ್ಮಿ, ಗೀತಾ ನಾಯ್ಕ್ ಕುಚ್ಚೂರು, ಪಾರ್ವತಿ ಪೂಜಾರಿ, ಸುಶೀಲಾ ಶೆಟ್ಟಿ ಉಪಸ್ಥಿತರಿದ್ದರು.

ಸಹಭೋಜನ, ಗ್ರಾಮವಾಸ್ತವ್ಯ
ಬ್ರಹ್ಮಾವರ: ಉಡುಪಿ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ಕೊಕ್ಕರ್ಣೆ ಸಮೀಪದ ಒಳಬೈಲಿನ ಕುಡುಬಿ ಕುಟುಂಬದ ಸದಸ್ಯರೊಂದಿಗೆ ಗ್ರಾಮವಾಸ್ತವ್ಯ ಮತ್ತು ಸದಸ್ಯರೊಂದಿಗೆ ಸಹಭೋಜನ ನಡೆಸಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ 100ನೇ ಜನ್ಮ ದಿನಾಚರಣೆ ಪ್ರಯುಕ್ತ 100 ಮಣ್ಣಿನ ಹಣತೆ ಬೆಳಗಿಸಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಉಸ್ತುವಾರಿ ಶೈಲಾ ಕುಟ್ಟಪ್ಪ, ನಿಯೋಜಿತ ಅಧ್ಯಕ್ಷೆ ಗೀತಾ ವಾಗ್ಲೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಬ್ರಹ್ಮಾವರ ಮಹಿಳಾ ಬ್ಲಾಕ್ ಅಧ್ಯಕ್ಷೆ ಗೋಪಿ ಕೆ.ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ರೋಶನಿ ಒಲಿವೆರಾ ಮತ್ತು ಒಳಬೈಲು ಕುಡುಬಿ ಕೂಡು ಕುಟುಂಬದವರು ಉಪಸ್ಥಿತರಿದ್ದರು. ಕುಡುಬಿ ಕುಟುಂಬದ ಗುರಿಕಾರ ಸಾಂತ ನಾಯ್ಕ, ಹಿರಿಯ ಮಹಿಳೆ ಸುಬ್ಬಿ ಬಾಯಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.