ADVERTISEMENT

ಹೆಬ್ರಿ ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:22 IST
Last Updated 9 ಸೆಪ್ಟೆಂಬರ್ 2017, 9:22 IST

ಹೆಬ್ರಿ: ಹೆಬ್ರಿಯಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರದ ಹೊಸ ಬೃಹತ್ ಕಟ್ಟಡವು ಹೊರಗಿನಿಂದ ಸುಸಜ್ಜಿತವಾಗಿ ಕಂಡರೂ ಒಳಗೆ ಕನಿಷ್ಠ ಮೂಲ ಸೌಲಭ್ಯವೂ ಇಲ್ಲವಾಗಿದೆ. ಚಿಕಿತ್ಸೆಗೆ ಬರುವ ಬಡ ಜನರಿಗೆ ಸರಿಯಾದ ಸೇವೆ ಸಿಗದೆ ಪರದಾಡುವಂತಾಗಿದೆ ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಆರೋಪಿಸಿದರು.\

ಹೆಬ್ರಿ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಸೇವಾ ಸಮಿತಿ, ಜಯಕರ್ನಾಟಕ ಸಂಘಟನೆ ವತಿಯಿಂದ ಗುರುವಾರ ಕೇಂದ್ರದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕೇಂದ್ರಕ್ಕೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸರಿಯಾದ ಹಾಸಿಗೆ ವ್ಯವಸ್ಥೆ, ಸ್ಕ್ಯಾನಿಂಗ್, ಔಷಧಿ, ಎಕ್ಸ್-ರೇ ಮೊದಲಾದ ವ್ಯವಸ್ಥೆಯಿಲ್ಲ.

ಹೆಬ್ರಿ, ನಾಡ್ಪಾಲು, ಬೇಳಂಜೆ-ಕುಚ್ಚೂರು, ಚಾರ, ಮುದ್ರಾಡಿ, ಶಿವಪುರ, ಕಡ್ತಲ, ಬೈರಂಪಳ್ಳಿ-ಪೆರ್ಡೂರು ಹೋಬಳಿ, ವರಂಗ, ಕಳ್ತೂರು, ಮಡಾಮಕ್ಕಿ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದ ಜನರು, ಕಬ್ಬಿನಾಲೆ, ಕೂಡ್ಲು, ಮೇಗದ್ದೆ ಪ್ರದೇಶಗಳ ಜನರು, ಹೆಬ್ರಿ ಆಸುಪಾಸಿನ ವಿವಿಧ ಶಾಲೆಗಳ ಸಾವಿರಾರು ಹಾಸ್ಟೆಲ್ ವಿದ್ಯಾರ್ಥಿಗಳು ಚಿಕಿತ್ಸೆಗೆ ಹೆಬ್ರಿ ಆಸ್ಪತ್ರೆಯನ್ನೇ ಅವಲಂ ಬಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರದಲ್ಲಿ ಕೇವಲ ಒಂದಿಬ್ಬರು ವೈದ್ಯರು ಮತ್ತು ಶುಶ್ರೂಷಕಿಯರು ಇದ್ದು, ತಜ್ಞ ವೈದ್ಯರೇ ಇಲ್ಲ. ಇರುವ ವೈದ್ಯಾಧಿಕಾರಿಗಳು ವಿವಿಧೆಡೆ ಸಭೆ, ಇತರ ಕರ್ತವ್ಯ ನಿರ್ವಹಿಸಲು ತೆರಳುವುದರಿಂದ ಇಡೀ ಆಸ್ಪತ್ರೆಯಲ್ಲಿ ಒಬ್ಬಿಬ್ಬರು ಶುಶ್ರೂಷಕಿಯರೇ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ. ರಾತ್ರಿ ಪಾಳಿಯಲ್ಲಿ ನೇಮಿಸಿರುವ ಒಬ್ಬರೇ ಶುಶ್ರೂಷಕಿಗೆ ಯಾವುದೇ ಭದ್ರತೆ ಇಲ್ಲ, ರಾತ್ರಿಯಲ್ಲಿ ಬರುವ ರೋಗಿಗಳನ್ನು ಕೇಳುವವರೇ ಇಲ್ಲ.

ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಯಾರೊಬ್ಬ ವೈದ್ಯರು ಸರಿಯಾದ ಸಮಯದಲ್ಲಿ ಲಭ್ಯವಿರುವುದಿಲ್ಲ. ಚಿಕಿತ್ಸೆಗೆ ಬೇಕಾದ ಅಗತ್ಯ ಸಲಕರಣೆ ಸೌಲಭ್ಯವಿಲ್ಲ. ಭಾನುವಾರ ರೋಗಿಗಳನ್ನು ಕೇಳುವವರೇ ಇಲ್ಲ’ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್, ಕಳ್ತೂರು ವಿಜಯ ಹೆಗ್ಡೆ ಮೊದಲಾದವರು ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ಅವರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿದರು.

ಆಸ್ಪತ್ರೆಯಲ್ಲಿ 23 ಹುದ್ದೆಗಳು ಭರ್ತಿಗೆ ಬಾಕಿ ಇದ್ದು, ತಜ್ಞ ವೈದ್ಯರ ಹುದ್ದೆಗಳ ನೇಮಕಾತಿಗೆ ಸರ್ಕಾರ ಮಂಜೂರಾತಿ ನೀಡಿದ್ದರೂ ಗ್ರಾಮೀಣ ಭಾಗಕ್ಕೆ ಬರಲು ಒಪ್ಪುತ್ತಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಡಳಿತ ವೈದ್ಯಾಧಿಕಾರಿ ಸೇರಿದಂತೆ 3 ವೈದ್ಯರು ಲಭ್ಯರಿದ್ದು, ಸಂಜೆ ನಂತರ ತುರ್ತು ಕರೆ ಮೇರೆಗೆ ಲಭ್ಯರಿರುತ್ತಾರೆ.

ಗ್ರೂಪ್ ಡಿ, ಪ್ರಯೋಗಾಲಯ ತಂತ್ರಜ್ಞ, ಫಾರ್ಮಾಸಿಸ್ಟ್ ಹುದ್ದೆಗಳಿಗೆ ಸರ್ಕಾರದ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಬರಲು ಒಪ್ಪುತ್ತಿಲ್ಲ ಎಂದು ಡಾ.ರೋಹಿಣಿ ಹೇಳಿದರು. ಮಿಥುನ್ ಶೆಟ್ಟಿ, ಉದಯ ಹೆಗ್ಡೆ, ಪ್ರವೀಣ್ ಸೂಡ, ರಾಘವೇಂದ್ರ ಡಿ.ಜಿ., ಚಾರಾ ಮಹಿಷಮರ್ಧಿನಿ ದೇವಸ್ಥಾನದ ಧರ್ಮದರ್ಶಿ ಸಿ. ರತ್ನಾಕರ ಶೆಟ್ಟಿ, ಇಂದಿರಾ ನಾಯ್ಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.