ADVERTISEMENT

ಹೊರ ರೋಗಿ ಸೇವೆ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:40 IST
Last Updated 17 ನವೆಂಬರ್ 2017, 6:40 IST

ಉಡುಪಿ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಗುರುವಾರದಿಂದ ಅನಿರ್ದಿಷ್ಟಾವಧಿ ಬಂದ್ ಆರಂಭಿಸಿವೆ.

ನಗರದ ಪ್ರಮುಖ ಆಸ್ಪತ್ರೆಗಳಾದ ಆದರ್ಶ, ಟಿಎಂಎ ಪೈ, ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಸೇರಿದಂತೆ ಎಲ್ಲ ಆಸ್ಪತ್ರೆಗಳು ಹೊರ ರೋಗಿ ವಿಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದವು.

ಆಸ್ಪತ್ರೆಗೆ ಬಂದ ರೋಗಿಗಳನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಷ್ಕರದ ಪರಿಣಾಮ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಿತ್ತು.

ADVERTISEMENT

‘ಶ್ವಾಸಕೋಶದ ದ್ರವ (ಫ್ಲುಯಿಡ್‌) ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬರು ಬೆಳಿಗ್ಗೆ ಖಾಸಗಿ ಆಸ್ಪತ್ರೆಗೆ ಹೋಗಿ, ಅಲ್ಲಿ ಸೇವೆ ಇಲ್ಲದ ಕಾರಣ ನಮ್ಮಲ್ಲಿಗೆ ಬಂದಿದ್ದರು. ದ್ರವ ತುಂಬಿದ ನಂತರ ಅದನ್ನು ಹೊರ ಹಾಕಬೇಕಾಗುತ್ತದೆ. ಆದ್ದರಿಂದ ಅವರನ್ನು ದಾಖಲಿಸಿಕೊಳ್ಳಲಾಯಿತು’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದರು. ಗಂಗೊಳ್ಳಿಯಿಂದ ರೋಗಿಯೊಬ್ಬರನ್ನು ಆಂಬುಲೆನ್ಸ್‌ನಲ್ಲಿ ಕರೆತಂದ ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ ಅವರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.

‘ನಮ್ಮಲ್ಲಿ ಪ್ರತಿ ದಿನ ಸಾಮಾನ್ಯವಾಗಿ 300 ಹೊರ ರೋಗಿಗಳು ಹಾಗೂ 150 ಒಳರೋಗಿಗಳು ಬರುತ್ತಾರೆ. ಆದರೆ ಇವತ್ತು ಎಲ್ಲರನ್ನೂ ವಾಪಸ್ ಕಳುಹಿಸಲಾಯಿತು. ಸರ್ಕಾರ ಬೇಡಿಕೆಗೆ ಸ್ಪಂದಿಸದ ಕಾರಣ ಈ ಕಠಿಣ ತೀರ್ಮಾಣ ಅನಿವಾರ್ಯವಾಗಿತ್ತು’ ಎಂದು ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಕೆ. ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ತನ್ನ ನಿಲುವು ಬದಲಿಸಿಲ್ಲ. ಆದ್ದರಿಂದ ನಾವೇ ಸ್ವ ಪ್ರೇರಣೆಯಿಂದ ಬಂದ್ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಪ್ರತಿ ದಿನ ಸಾವಿರಾರು ರೋಗಿಗಳು ಬರುವ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಸಹ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು.

* * 

ಕಾಯ್ದೆಯಲ್ಲಿನ ಕೆಲವು ಅಂಶಗಳು ವೈದ್ಯರಿಗೆ ಮಾರಕವಾಗಿದ್ದು ಅದನ್ನು ಹಿಂಪಡೆಯಬೇಕು ಎಂಬುದು ಬೇಡಿಕೆಯಾಗಿದೆ.
ಡಾ. ಕೆ. ಚಂದ್ರಶೇಖರ್,
ಆದರ್ಶ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.