ADVERTISEMENT

‘ಅಲ್ಲಮ ಗುರುವೂ ಹೌದು, ವಿಮರ್ಶಕನೂ ಹೌದು’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2014, 10:09 IST
Last Updated 8 ನವೆಂಬರ್ 2014, 10:09 IST

ಉಡುಪಿ: ‘ಎಲ್ಲವನ್ನು ಪ್ರಶ್ನಿಸುವ, ವಿಮರ್ಶಿಸುವ ಅಲ್ಲಮನ ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಅಲ್ಲಮ ವಚನ ಚಳವಳಿಯ ಗುರುವೂ ಹೌದು. ತೀಕ್ಷ್ಮ ವಿಮರ್ಶಕನೂ ಹೌದು’ ಎಂದು ವಿಮರ್ಶಕ ಬಸವರಾಜ ಕಲ್ಗುಡಿ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಕಾಂತಾ­ವರ ಅಲ್ಲಮ ಪ್ರಭು ಪೀಠ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತವಾಗಿ ತೆಂಕನಿಡಿಯೂರು ಕಾಲೇಜಿನ ಸಭಾಂಗ­ಣ­ದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಪರಂಪರೆ ಮತ್ತು ಆಧುನಿಕತೆಯೊಂದಿಗೆ ಅಲ್ಲಮ ಪ್ರಭುವಿನ ಅನುಸಂಧಾನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ವ್ಯಕ್ತಿಗಳು ಆಯಾ ಕಾಲದಲ್ಲಿ ನೀಡಿದ ಚಿಂತನೆಗಳು ಬದುಕಿನ ತತ್ವ­ಗಳಾದರೆ ಅದಕ್ಕಿಂತ ಮಹತ್ವವಾ­ದುದು ಇನ್ನೊಂದಿಲ್ಲ. ಆದರೆ ತತ್ವಗಳ ಬದಲು ಅವರೇ ನಾಯಕರಾಗಿ ವ್ಯಕ್ತಿ ಪೂಜೆಗೆ ಒಳಗಾಗುತ್ತಿದ್ದಾರೆ ಎಂದರು. ‘ಅಲ್ಲಮ ಭಕ್ತ ಎನ್ನುವ ಚೌಕಟ್ಟಿ­ನೊಳಗೆ ಇರುವವರನ್ನು ಮತ್ತು ಹೊರಗೆ ಇರುವವರನ್ನು ಸೆಳೆಯಲು ಯತ್ನಿಸಿದಾತ. ಆತ ವೀರಶೈವ, ಲಿಂಗಾ­ಯತ ಹೀಗೆ ಯಾವ ಮತೀಯ ಚೌಕ­ಟ್ಟಿಗೆ ಒಳಗಾಗದೆ ಹೊರಗೆ ನಿಂತು ಎಲ್ಲ­ರಿಗೂ ಬೇಕಾದವನಾದ.

ವಚನ ಪರಂಪರೆಯಲ್ಲಿಯೇ ಪರ್ಯಾಯ ದಾರಿ ಕಂಡುಕೊಂಡವ. ಧರ್ಮ ಎನ್ನು­ವುದು ಹೊರೆಗೆಲ್ಲೋ ಇಲ್ಲ. ಅದು ನಿನ್ನೊ­ಳಗೆ, ನಿನ್ನ ವ್ಯಕ್ತಿತ್ವದೊಳಗೆ ಇದೆ ಎನ್ನುವುದು ಅಲ್ಲಮನ ವಾದ’ ಎಂದು ಹೇಳಿದರು. ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತ ಭಾಷಾ ಅಧಿಪತ್ಯ ಸ್ಥಾಪಿಸಿದ್ದ ಕಾಲದಲ್ಲಿ ಕನ್ನಡಕ್ಕೂ ಅಭಿವ್ಯಕ್ತಿಯ ಶಕ್ತಿ ಇದೆ ಎಂದು ತೋರಿಸಿ­ದವ ಅಲ್ಲಮ ಎಂದು ಹೇಳಿದರು.

ವಚನಕಾರರೆಲ್ಲ ಒಂದು ಎಂಬ ಚಿಂತನೆ ಕೂಡಾ ಸರಿಯಲ್ಲ. ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮ ಪ್ರತಿಯೊಬ್ಬರ ಚಿಂತನೆಯೂ ಭಿನ್ನತೆ­ಯಿಂದ ಕೂಡಿತ್ತು. ಅಲ್ಲಮನನ್ನು ಸೇರಿಸಿ­ದಂತೆ ಎಲ್ಲ ಚಿಂತಕರನ್ನು ರೂಪಾಂತರ­ಗೊಳಿಸುವ ಕ್ರಿಯೆಗಳು ನಡೆಯುತ್ತಿವೆ. ಅಪವ್ಯಾಖ್ಯಾನ ನಡೆಯುತ್ತಿದೆ. ಇವೆಲ್ಲ­ವನ್ನು ಸರಿಪಡಿಸಬೇಕು ಎಂದರು.

ಸಲಹಾ ಮಂಡಳಿ ಸದಸ್ಯ ಡಾ. ಜಯಪ್ರಕಾಶ್ ಮಾವಿನಕುಳಿ, ಪ್ರಭಾರ ಪ್ರಾಂಶುಪಾಲ ಗೋಪಾಲಕೃಷ್ಣ ಗಾಂವ್ಕರ್‌ ಇದ್ದರು.
ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದ ಸಂಚಾಲಕ ಎಲ್. ಸುರೇಶ್ ಕುಮಾರ್ ಸ್ವಾಗತಿಸಿದರು. ಅಲ್ಲಮಪ್ರಭು ಪೀಠ ನಿರ್ದೇಶಕ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ರಾಧಾಕೃಷ್ಣ ವಂದಿಸಿದರು. ಉಪನ್ಯಾಸಕ ಡಾ. ಗಣನಾಥ ಎಕ್ಕಾರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.