ADVERTISEMENT

‘ಕಾರಂತ ಮಹಾಸಾಗರ’ ಸರಣಿ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 5:13 IST
Last Updated 21 ಜುಲೈ 2014, 5:13 IST

ಬ್ರಹ್ಮಾವರ: ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ ದಶಮಾನೋತ್ಸವದ  ಪ್ರಯುಕ್ತ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕಾರಂತರ ಹುಟ್ಟು ಬದುಕು, ಕಾರಂತರ ಅನುಭವ ಕಥನಗಳ ಬಗ್ಗೆ ಬೆಳಕು ಚೆಲ್ಲುವ ಕಾರಂತ ಮಹಾಸಾಗರ ನೆನಪಿನ ಭಾವಯಾನ ಎನ್ನುವ ಸುಮಾರು 50ಕಂತುಗಳ ಸರಣಿ ಕಾರ್ಯಕ್ರಮಕ್ಕೆ ಭಾನುವಾರ ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಚಾಲನೆ ನೀಡಲಾಯಿತು.

ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ವಿಠಲ್‌ ವಿ ಗಾಂವ್‌ಕರ್‌ ಕಾರ್ಯಕ್ರಮ ಉದ್ಘಾಟಿಸಿ, ‘ಸಾಗರಕ್ಕೆ ಸಾಗರವೇ ಸಾಕ್ಷಿ ಎನ್ನುವ ಹಾಗೆ ಕಾರಂತರಿಗೆ ಕಾರಂತರೇ ಸಾಟಿಯಾಗಿದ್ದರು. ಇಂದಿನ ಎಳೆಯ ಮಕ್ಕಳ ಮೂಲಕ ಕಾರಂತರ ವಿಚಾರಧಾರೆಗಳನ್ನು ತಿಳಿಸಿಕೊಡುವ ಈ ನೂತನ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಹುಟ್ಟೂರು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೋಟದ ಉದ್ಯಮಿ ಆನಂದ್‌ ಸಿ ಕುಂದರ್‌, ಯು ಚಾನೆಲ್‌ನ ಪ್ರಸಾದ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತಿ ಹಾಗೂ ಅಧ್ಯಾಪಕ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಟ ಡಾ.ಶಿವರಾಮ ಕಾರಂತ ಟ್ರಸ್ಟ್, ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಜೆ.ಸಿ.ಐ ಕಲ್ಯಾಣಪುರ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ ಮತ್ತು ಕೋಟತಟ್ಟು ಗ್ರಾಮ ಪಂಚಾಯಿತಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.