ADVERTISEMENT

‘ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸಿ’

ಕೋಟ ಹಂದಟ್ಟು ಪರಿವರ್ತನಾ ಮಹಿಳಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 5:21 IST
Last Updated 1 ಸೆಪ್ಟೆಂಬರ್ 2014, 5:21 IST

ಕೋಟ (ಬ್ರಹ್ಮಾವರ): ‘ಸಂಸ್ಕೃತಿಯ ಉಳಿವಿನಲ್ಲಿ  ಮಹಿಳೆಯರ ಪಾತ್ರ ಮಹತ್ವದಾಗಿದ್ದು, ತಮ್ಮ ಮಕ್ಕಳಿಗೆ ಎಳೆವೆಯಲ್ಲಿಯೇ ಉತ್ತಮ ಸಂಸ್ಕಾರ­ಗಳನ್ನು ತಿಳಿಸುವುದರಿಂದ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಿದೆ’ ಎಂದು ಕೋಟ ಪೊಲೀಸ್‌ ಠಾಣೆಯ ಪಿ.ಎಸ್‌.ಐ ಕೆ.ಆರ್‌. ನಾಯಕ್‌ ಹೇಳಿದರು.

ಕೋಟ ಹಂದಟ್ಟಿನ ಗೆಳೆಯರ ಬಳಗದ ವತಿಯಿಂದ ಕೋಟ ವಲಯ ಗ್ರಾಮಾಭಿವೃದ್ಧಿ ಯೋಜನೆ, ಮತ್ತು ಸಮರ್ಪಣಾ ಕೋಟ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ಮಹಿಳೆಯರ  ಕರ್ತವ್ಯ ಮತ್ತು ಹಕ್ಕುಗಳ ಕುರಿತು ಮಾಹಿತಿ ತಿಳಿಸುವ  ಪರಿವರ್ತನಾ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳಾ ದೌರ್ಜನ್ಯದಂತಹ ಘಟನೆಗಳು ಹೆಚ್ಚುತ್ತಿದ್ದು, ಸ್ತ್ರೀಯರನ್ನು  ಪೂಜ್ಯ ಭಾವದಿಂದ ನೋಡುವ ಮನಸ್ಥಿತಿ ದೂರವಾಗಿರುವುದು ಹಾಗೂ ಸ್ತ್ರೀಯರು ವಿದೇಶಿ ಸಂಸ್ಕೃತಿಯತ್ತ ಮುಖ ಮಾಡು­ತ್ತಿರುವುದು ಇದಕ್ಕೆ  ಪ್ರಮುಖ ಕಾರಣ’ ಎಂದು ಅವರು ಹೇಳಿದರು.
ಗೆಳೆಯರ ಬಳಗ ಯುವಕ ಸಂಘದ ಅಧ್ಯಕ್ಷ  ಜಯಪ್ರಕಾಶ್ ಎಚ್. ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಗೌರವಾಧ್ಯಕ್ಷ  ಸಂಜೀವ ಸಿ. ಗುಂಡ್ಮಿ,  ಸಮರ್ಪಣಾ ಕೋಟದ ಅಧ್ಯಕ್ಷ  ಸತೀಶ್ ವಡ್ಡರ್ಸೆ ಮತ್ತಿತರರು  ಉಪಸ್ಥಿತರಿದ್ದರು.
ನಂತರ ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.­ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವವರಮನೆ ಅವರು ಮಕ್ಕಳ ಲಾಲನೆ-ಪಾಲನೆ ಬಗ್ಗೆ, ಆಪ್ತ ಸಮಾಲೋಚಕಿ ಡಾ.ಪದ್ಮಾ ರಾಘವೇಂದ್ರ ರಾವ್  ಮಹಿಳೆಯರ ಸಮಸ್ಯೆ ಮತ್ತು ಸವಾಲು ಮತ್ತು ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರಿಂದ ಬನ್ನಿ ಬದಲಾಗೋಣ ಎಂಬ ವಿಚಾರವಾಗಿ ಗೋಷ್ಠಿ ನಡೆಯಿತು.

ಪ್ರಕಾಶ ಹಂದಟ್ಟು ನಿರೂಪಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕೋಟ ವಲಯ ಮೇಲ್ವಿಚಾರಕ ಮೋಹನ ಕೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.