ADVERTISEMENT

‘ಮಕ್ಕಳಿಗೆ ಕಲೆ ಸಂಸ್ಕೃತಿ ಪರಿಚಯ ನಮ್ಮ ಜವಾಬ್ದಾರಿ’

ಜಾನುವಾರುಕಟ್ಟೆ ಮಕ್ಕಳ ಕ್ರಿಯಾತ್ಮಕ ಬೇಸಿಗೆ ರಜಾ- ಮಜಾ ಶಿಬಿರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 12:24 IST
Last Updated 19 ಏಪ್ರಿಲ್ 2015, 12:24 IST

ಬ್ರಹ್ಮಾವರ:  ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದರೊಂದಿಗೆ ಮಕ್ಕಳಿಗೆ ರಜಾ ದಿನದಲ್ಲಿ ವಿವಿಧ ಕೌಶಲ್ಯದ ಬಗ್ಗೆ ತಿಳಿಸುವುದು ಕೂಡಾ ತುಂಬಾ ಅನಿವಾರ್ಯವಾಗಿದೆ ಎಂದು ಬಿಲ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಆರ್‌ ಶೆಟ್ಟಿ ಹೇಳಿದರು.

ಜಾನುವಾರುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಜಾನುವಾರುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಕುಡುಬಿ ಮಲ್ಲಿಕಾರ್ಜುನ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ಕಾಲ ನಡೆದ ಮಕ್ಕಳ ಕ್ರಿಯಾತ್ಮಕ ಬೇಸಿಗೆ ರಜಾ- ಮಜಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಇಂತಹ ಶಿಬಿರ ಗಳಿಗೆ ಮಕ್ಕಳ ಪೋಷಕರು ಸ್ವತಃ ಆಸಕ್ತಿ ವಹಿಸಿ, ಹಣ ಕೊಟ್ಟು ಮಕ್ಕಳನ್ನು ಶಿಬಿರ ಗಳಿಗೆ ಸೇರಿಸುವುದು ವಾಡಿಕೆಯಾಗಿದೆ. ಆದರೆ ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಉಚಿತವಾದ ಶಿಬಿರ ಸಂಘಟಿಸುವುದು ತುಂಬಾ ದುಸ್ತರ ವಾಗಿದೆ. ಈ ಕ್ರಿಯಾತ್ಮಕ ಬೇಸಿಗೆ ಶಿಬಿರ ದಲ್ಲಿ ವಿವಿಧ ಕಲಾಕೃತಿ, ಮುಖವಾಡ, ಚಿತ್ರಕಲೆ, ಪರ್ಯಾಯ ಕವನ ರಚನೆ, ಗೊಂಬೆ ತಯಾರಿಕೆ ಮತ್ತು ಅಭಿನಯ ಗೀತೆ, ವಿವಿಧ ಕಲಾಕೃತಿಗಳ ಪ್ರಾತ್ಯಕ್ಷಿತೆ ಯೊಂದಿಗೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಪೂರಕ ವಾತಾವರಣ ನಾವು ಮಾಡಿಕೊಡಬೇಕೆಂದು ಅವರು ಹೇಳಿದರು. 

ಶಾಲೆಯ ಮುಖ್ಯ ಶಿಕ್ಷಕ ಎ. ರಾಘವೇಂದ್ರ ಉಡುಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಮುಂದೆ ತಾವು ಕೂಡಾ ಸೃಜನಶೀಲತೆವುಳ್ಳ ವ್ಯಕ್ತಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡ ಬೇಕೆಂದು ಕರೆ ನೀಡಿದರು.

ಶಾಲಾಭಿವೃದ್ಧಿ ಮತ್ತು ಮೇಲು ಸ್ತುವಾರಿ ಸಮಿತಿಯ ಅಧ್ಯಕ್ಷೆ ಸುಮತಿ ಆಚಾರ್, ಜಾನುವಾರುಕಟ್ಟೆ ಕುಡುಬಿ ಮಲ್ಲಿಕಾರ್ಜುನ ಯುವಕ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ,  ಆನಂದ ನಾಯ್ಕ, ಶೋಭಾ, ಲಕ್ಷ್ಮಣ ನಾಯ್ಕ, ಚಂದ್ರ ನಾಯ್ಕ, ಅಭಿವೃದ್ಧಿ ಸಂಸ್ಥೆಯ ಕಾರ್ಯ ದರ್ಶಿ ರಮೇಶ್ ವಕ್ವಾಡಿ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಕೀಲಾ ಡಿ ರಾವ್ ವಂದಿಸಿದರು.  ನಾಗರತ್ನ ಜೆ. ಆಚಾರ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.