ADVERTISEMENT

‘ಯಕ್ಷಗಾನದಿಂದ ಭಾಷಾ ಉಳಿವು’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2015, 6:45 IST
Last Updated 8 ನವೆಂಬರ್ 2015, 6:45 IST

ಬ್ರಹ್ಮಾವರ: ಕಲೆಯ ವೀಕ್ಷಣೆಗೆ ಸಂಖ್ಯಾಬಲ ಮುಖ್ಯವಲ್ಲ, ಆಸಕ್ತರು ಮುಖ್ಯ. ಭಾಷೆಯನ್ನು ಉಳಿಸುವ, ಪುರಾಣ ಕತೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಲೆ ಯಕ್ಷಗಾನ ಮಾತ್ರ ಎಂದು ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಕೊಮೆ ಯಶಸ್ವಿ ಕಲಾವೃಂದ, ತೆಕ್ಕಟ್ಟೆಯ ಚಂದ್ರಕಲಾ ಯಕ್ಷೋತ್ಸವ ಕ್ಷೇತ್ರೋತ್ಸವ ಕಾರ್ಯ ಕ್ರಮದಡಿ ಶುಕ್ರವಾರ ನಡೆದ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-29ರ ದೇರಾಜೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ರೂವಾರಿ ಶ್ರೀಧರ ಹಂದೆ ಮಾತನಾಡಿ, ಸಮಾಜ ಬೇಕು ಬೇಕು ಎನ್ನುವಾಗಲೇ ನಿವೃತ್ತವಾಗಬೇಕು, ದೇರಾಜೆ ಸಂಸ್ಮರಣೆ ನಿಜವಾಗಿಯೂ ಅರ್ಥಪೂರ್ಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕರಾವಳಿಯ ಜನತೆಗೆ ಮಾತು, ಭಾಷೆ, ಪುರಾಣ ಕಲಿಸಿಕೊಟ್ಟದ್ದು ಯಕ್ಷಗಾನ. ತಾಳಮದ್ದ ಲೆಯ ಶೈಲಿಯನ್ನು ಪಾಠದ ವಿಷಯದಲ್ಲಿ ಮಕ್ಕಳೊಂದಿಗೆ ಅಳವಡಿಸಿಕೊಂಡರೆ ಯಕ್ಷಗಾನದಿಂದ ವಿದ್ಯಾಕ್ಷೇತ್ರಕ್ಕೂ ದೊಡ್ಡ ಕೊಡುಗೆ ಸಿಗುವಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ನಾಟಕ ವಿನ್ಯಾಸಕಾರ ಹಾಗೂ ದೇರಾಜೆ ಅವರ ಸುಪುತ್ರ ಮೂರ್ತಿ ದೇರಾಜೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ತಾರಾನಾಥ ವರ್ಕಾಡಿ ದೇರಾಜೆ ಸಂಸ್ಮರಣಾ ಭಾಷಣ ಮಾಡಿದರು.

ಗಿಲಿಗಿಲಿ ಮ್ಯಾಜಿಕ್ ಸಂಸ್ಥೆಯ ರೂವಾರಿ ಪ್ರೊ.ಶಂಕರ್, ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ, ಕೋಟ ಸುದರ್ಶನ ಉರಾಳ ಉಪಸ್ಥಿತರಿದ್ದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಕೈಲಾಸ ಕಲಾ ಕ್ಷೇತ್ರದ ಅಧ್ಯಕ್ಷ ಸೀತಾ ರಾಮ ಶೆಟ್ಟಿ ಕೊಕೂರು ವಂದಿಸಿದರು. ಚಂದ್ರಯ್ಯ ಆಚಾರ್ ಪ್ರಾರ್ಥಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಭದ್ರಾ ರಾಯಭಾರ ತಾಳಮದ್ದಲೆ ನಡೆಯಿತು. ಕಲಾವಿದರಾಗಿ ಕೆ.ಪಿ.ಹೆಗಡೆ, ಚಂದ್ರಯ್ಯ ಆಚಾರ್, ಕೂಡ್ಲಿ ದೇವದಾಸ ರಾವ್, ಕೃಷ್ಣಾನಂದ ಶಣೈ ಶಿರಿಯಾರ, ವಾಸುದೇವ ಸಾಮಗ, ವಾಸುದೇವ ರಂಗ ಭಟ್, ತಾರಾನಾಥ ವರ್ಕಾಡಿ, ಸುಜಯೀಂದ್ರ ಹಂದೆ ಮತ್ತು ಮಂಜು ನಾಥ ಕೆದ್ಲಾಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.