ADVERTISEMENT

‘ಶೀಘ್ರವೇ ಬಿ.ಸಿ.ರೋಡ್ ಬಸ್‌ನಿಲ್ದಾಣ ಕಾಮಗಾರಿ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 11:15 IST
Last Updated 2 ಮಾರ್ಚ್ 2015, 11:15 IST

ವಿಟ್ಲ:  ಬಿ.ಸಿ.ರೋಡ್ ಬಸ್ ನಿಲ್ದಾಣಕ್ಕೆ ₨7 ಕೋಟಿ ಅನುದಾನ ಮಂಜೂರಾಗಿದ್ದು ಶೀಘ್ರ­ದಲ್ಲಿ ಕಾಮಗಾರಿ ಆರಂಭವಾಗಲಿದೆ. ಬಿ.ಸಿ.­ರೋಡ್‌ನಲ್ಲಿ ಮಿನಿ ವಿಧಾನಸೌಧಕ್ಕೆ ₨10 ಕೋಟಿ ಅನು­ದಾನ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮ­ಗಾರಿಗಳ ಉದ್ಘಾಟನಾ ಸಮಾರಂಭ ಮತ್ತು ಶಂಕು­ಸ್ಥಾಪನೆ ನೆರವೇರಿಸಿ, ಕೊಡಂಗಾಯಿಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಬಹುಗ್ರಾಮ ಕುಡಿಯುವ ನೀರಿನ 5 ಯೋಜ­ನೆಗಳಿಗೆ ಮಂಜೂರಾತಿ, 94ಸಿ ಯೋಜನೆ­ಯಡಿಯಲ್ಲಿ 12 ಸಾವಿರ ಅರ್ಜಿಗಳು ಬಂದಿದ್ದು ವಿಮರ್ಶೆ ಮಾಡಿ ಅರ್ಹ ಫಲಾನುಭವಿಗಳಿಗೆ ಹಕ್ಕು­ಪತ್ರ ವಿತರಿಸಲಾಗುವುದು. ಬಂಟ್ವಾಳ ವಿಧಾ­ನ­ಸಭಾ ಕ್ಷೇತ್ರದ ಸಾಲೆತ್ತೂರು
ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಗೆ ಸೇರಿಸಿ­ಕೊಳ್ಳಲಾಗಿದು, ಆ ಮೂಲಕ ಗ್ರಾಮಕ್ಕೆ ₨75 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ನಗರ­ದಲ್ಲಿ ಬಡವರಿಗೆ ನಿವೇಶನ ಕೊಡುವ ಕಾರ್ಯ­ಕ್ರಮ 94 ಸಿಸಿ ಎಂಬ ಯೋಜನೆಯಲ್ಲಿ ಕೈಗೆತ್ತಿ­ಕೊಳ್ಳಲಾಗಿದೆ. ಕನ್ಯಾನ- ಆನೆಕಲ್ಲು ರಸ್ತೆ ಕಾಮ­ಗಾರಿಗೆ ಮತ್ತೆ ಹೆಚ್ಚಿನ ಅನುದಾನ ದೊರಕಿ, ಕಾಮಗಾರಿ ಪೂರ್ತಿಗೊಳಿಸುವುದಕ್ಕೆ ಸಾಧ್ಯ­ವಾಗಿದೆ ಎಂದರು.

ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ.­ಸದಸ್ಯ ಮಾಧವ ಎಸ್.ಮಾವೆ, ವಿಟ್ಲಪಡ್ನೂರು ಗ್ರಾ.ಪಂ.ಅಧ್ಯಕ್ಷೆ ಚಂದ್ರಿಕಾ ಪಡಾರು, ಉಪಾಧ್ಯಕ್ಷ ಅಬ್ದುಲ್‌ರಹಿಮಾನ್ ಕಡಂಬು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ನರೇಂದ್ರಬಾಬು, ವಿಟ್ಲ­ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಮೂರ್ಜೆಬೆಟ್ಟು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್‌ಆಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಆರ್‌ಐ ದಿವಾಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ ಕೆ. ಮತ್ತು ಗ್ರಾ.ಪಂ.ಸದಸ್ಯರು ಭಾಗವಹಿಸಿದ್ದರು.

ಕಾಪುಮಜಲು ಮಲರಾಯೀ ಮೂವರ್ ದೈವಂಗಳು ದೈವಸ್ಥಾನ ಜೀರ್ಣೋದ್ಧಾರಕ್ಕೆ ಅನು­ದಾನ ಬಿಡುಗಡೆ ಮಾಡಬೇಕೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಭುಜಂಗ ರೈ ಪಡಾರುಗುತ್ತು, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಅವರು ಮನವಿ ಮಾಡಿದರು. ನಿವೃತ್ತ ಪಿಡಿಒ ಪೌಲಿನ್ ತಾವ್ರೋ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅಪ್ಪಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಡಾರು ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ ಪ್ರಾಸ್ತಾವಿಕ ಮಾತನಾಡಿದರು. ನೌಫಲ್ ಕುಡ್ತಮುಗೇರು ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.