ADVERTISEMENT

‘ಸಂಶೋಧಕ ಅಪೂರ್ವ ಸಂಗತಿ ಗುರುತಿಸಬೇಕು’

ಜರ್ಮನಿಯ ಬ್ರೂಕ್‌ನರ್‌, ಪ್ರೊ. ವಿವೇಕ ರೈ ಅವರ ಸಂಪಾದಿತ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2015, 10:59 IST
Last Updated 8 ಫೆಬ್ರುವರಿ 2015, 10:59 IST

ಉಡುಪಿ: ‘ಅಪೂರ್ವ ಸಂಗತಿಗಳನ್ನು ಗುರುತಿಸುವ ಪ್ರಜ್ಞೆ ಸಂಶೋಧಕನಲ್ಲಿ ಇರಬೇಕು. ನಿರ್ದಿಷ್ಟವಾದ ಸಂಗತಿಯನ್ನು ಹುಡುಕುವಾಗ ಆಕಸ್ಮಿಕವಾಗಿ ಸಿಗುವ ಇನ್ನೊಂದು ಪ್ರಮುಖ ವಿಷಯದ ಬಗ್ಗೆಯೂ ಆತನಿಗೆ ಕುತೂಹಲ ಮೂಡಬೇಕು’ ಎಂದು ಪ್ರೊ. ಸಿ.ಎನ್‌. ರಾಮಚಂದ್ರನ್‌ ಹೇಳಿದರು.

ಜರ್ಮನಿಯಲ್ಲಿ ದೊರೆತ ಹಸ್ತಪ್ರತಿಯ ಆಧಾರ ದಲ್ಲಿ ಜರ್ಮನಿಯ ಹೈಡ್ರೂನ್ ಬ್ರೂಕ್‌ನರ್‌ ಮತ್ತು ಪ್ರೊ. ಬಿ.ಎ. ವಿವೇಕ ರೈ ಅವರು ಸಂಪಾದಿಸಿ ಪ್ರಕಟಿಸಿದ ‘ದೇವುಪೂಂಜ’ನನ್ನು ಕುರಿತಾದ ಮೌಖಿಕ ಕಥಾನಕದ ತುಳು ಮೂಲದ ಆಂಗ್ಲ ಅನುವಾದ ಗ್ರಂಥವನ್ನು ನಗರದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮೌಖಿಕ ಕಥನ ಸಾಹಿತ್ಯ ಕಮ್ಮಟದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಓದುಗನೊಬ್ಬ ಮೂಲ ಕೃತಿಯನ್ನು ಹೇಗೆ ಗ್ರಹಿಸಬಲ್ಲನೋ, ಅಂತಹ ಗ್ರಹಿಕೆ ಅನುವಾದಿತ ಕೃತಿಯ ಓದುಗನಿಗೂ ಸಿಗುವಂತೆ ಮಾಡಬೇಕು. ಅನುವಾದಿತ ಕೃತಿಯನ್ನು ರೂಪಿಸಿರುವ ಸಂಸ್ಕೃತಿ ಓದುಗನಿಗೆ ತಿಳಿಯಬೇಕು. ದೀರ್ಘ ಮತ್ತು ವಿಮ ರ್ಶಾತ್ಮಕ ಆವರಣ, ಗ್ರಂಥಸೂಚಿಯನ್ನು ಕೃತಿ ಹೊಂದಿರಬೇಕು. ಕೃತಿಯ ಸಂದರ್ಭ, ಕಾಲ, ದೇಶ ಮತ್ತು ಅದನ್ನು ರೂಪಿಸಿರುವ ವೈಚಾರಿಕತೆ ಇರ ಬೇಕು. ವಿಮರ್ಶಾತ್ಮಕ ಆವರಣ ಇರುವ ಕೃತಿ ವಿದ್ವತ್‌ಪೂರ್ಣ ಕೃತಿ ಎಂದು ಎ.ಕೆ. ರಾಮಾ ನುಜನ್‌ ಅವರು ಹೇಳುತ್ತಿದ್ದರು ಎಂದರು.

ಭಾಷೆ ತಮ್ಮದಲ್ಲದಿದ್ದರೂ, ಪುಸ್ತಕದಿಂದ ತಮಗೇನೂ ಪ್ರಯೋಜನ ಇಲ್ಲದಿದ್ದರೂ ಬ್ರೂಕ್‌ನರ್‌ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ವಿವೇಕ ರೈ ಅವರಿಗೆ ಸಂಶೋಧಕನ ಕಣ್ಣಿದೆ. ಈ ಪುಸ್ತಕ ತುಳು ಸಾಹಿತ್ಯಕ್ಕೆ ಮಾತ್ರವಲ್ಲದೆ ವಿದ್ವತ್‌ ಪ್ರಪಂಚಕ್ಕೆ ಒಳ್ಳೆಯ ಕೊಡುಗೆ ಎಂದರು.
ತುಂಬಾ ಅಪರೂಪ ಪದಗಳು ಈ ಕೃತಿಯಲ್ಲಿವೆ. ಗಂಡು ಹೆಣ್ಣಿಗಿಂತ ಮೇಲು ಎಂಬ ಭಾವನೆ ಆ ಕಾಲದಲ್ಲಿಯೂ ಇತ್ತು ಎಂದು ಪುಸ್ತಕದಲ್ಲಿ ಬರುವ ಕೆಲವು ಸಂಗತಿಗಳು ಹೇಳುತ್ತವೆ ಎಂದು ಹೇಳಿದರು.

ಮಣಿಪಾಲ್‌ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್‌. ಶಾಂತಾರಾಮ್‌ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕ ರೈ, ಹೈಡ್ರೂನ್ ಬ್ರೂಕ್‌ನರ್‌, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್‌. ಕೃಷ್ಣಭಟ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.