ADVERTISEMENT

‘ಸಿಎಂ ಪರಿಹಾರ ನಿಧಿಯಿಂದ ನೆರವು’

ಕುಮಟಾದ ಬರ್ಗಿ ಗ್ಯಾಸ್‌ ಟ್ಯಾಂಕರ್‌ ದುರಂತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 5:17 IST
Last Updated 5 ಸೆಪ್ಟೆಂಬರ್ 2015, 5:17 IST

ಉಡುಪಿ: ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದಲ್ಲಿ ಅಡುಗೆ ಅನಿಲ ಸಾಗಣೆ ಟ್ಯಾಂಕರ್ ಅಪಘಾತಕ್ಕೀಡಾಗಿ ಸಂಭವಿ­ಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ­ನಾಡಿದರು.

ಭಾರತ್‌ ಪೆಟ್ರೋಲಿಯಂ ಕಂಪೆನಿ (ಬಿಪಿಸಿಎಲ್‌) ವತಿಯಿಂದ ಎಲ್ಲ ಸಂತ್ರಸ್ತರಿಗೆ ₹10 ಲಕ್ಷ ಪರಿಹಾರ ಕೊಡಿಸಲಾಗುತ್ತದೆ. ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಹೆಚ್ಚಿನ ಪರಿಹಾರ ನೀಡಿ ಎಂದು ಸಹ ಕಂಪೆನಿ ಅಧಿಕಾರಿಗಳಿಗೆ ತಾಕೀತು ಮಾಡಲಾ­ಗುವುದು. ಘಟನೆಯಲ್ಲಿ ಒಟ್ಟು 12 ಮನೆಗಳಿಗೆ ಹಾನಿಯಾಗಿದೆ. ಜಾನು­ವಾರು­ಗಳು ಸಾವನ್ನಪ್ಪಿವೆ ಹಾಗೂ ಬೆಳೆ ನಾಶವಾಗಿದೆ. ಇದೆಲ್ಲದಕ್ಕೂ ಪ್ರತ್ಯೇಕವಾಗಿ ಪರಿಹಾರ ಕೊಡಿಸಲಾ­ಗುತ್ತದೆ.

ಗಾಯಾಳುಗಳಿಗೆ ₹1 ಲಕ್ಷ ಹಾಗೂ ಮೃತಪಟ್ಟವರ ಕುಟುಂಬಕ್ಕೆ ₹2 ಲಕ್ಷ ಮಧ್ಯಂತರ ಪರಿಹಾರ ಸಿಗಲಿದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನೂ ಕಂಪೆನಿಯೇ ಭರಿಸಲಿದೆ. ಸರ್ಕಾರವೂ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಅಡುಗೆ ಅನಿಲ ಸಾಗಣೆ ಟ್ಯಾಂಕರ್ ವಾಹನಗಳ ಸಂಚಾರವನ್ನು ರಾತ್ರಿ ವೇಳೆ ನಿಷೇಧ ಮಾಡುವ ಬಗ್ಗೆ ಯೋಚಿಸ­ಲಾಗುವುದು. ಘಟನೆ ನಡೆದ ವೇಳೆ ಚಾಲಕ ಮಾತ್ರ ಇದ್ದ. ಆತನೂ ಗಾಯಗೊಂಡಿದ್ದರಿಂದ ಬೆಳಿಗ್ಗೆ ವರೆಗೆ ಯಾರಿಗೂ ಅಪಘಾತದ ವಿಷಯ ಗಮನಕ್ಕೆ ಬಂದಿರಲಿಲ್ಲ. ವಾಹನದಲ್ಲಿ ಚಾಲಕನ ಜೊತೆ ಇನ್ನೊಬ್ಬ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು ಎಂದು ಬಿಪಿಸಿಎಲ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಕಾರವಾರದಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ಕಾಲೇಜನ್ನು ಸಹ ಆರಂಭಿಸಲಾಗುವುದು. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ. ಘಟನೆ ನಡೆದೊಡನೆ ಅಧಿಕಾರಿಗಳನ್ನು ಸಂಪ­ರ್ಕಿಸಿ ಅಗತ್ಯ ಸಲಹೆ ಸೂಚನೆ ನೀಡಲಾಯಿತು. ದುರಂತ ನಡೆದ ಕೆಲವೇ ಗಂಟೆಗಳಲ್ಲಿ ಗಾಯಾಳುಗಳನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು. ‘ಬಿಬಿಎಂಪಿಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ವಿಷಯ ಪಕ್ಷಕ್ಕೆ ಬಿಟ್ಟಿದ್ದು. ಪಕ್ಷ ಯಾವ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧ’ ಎಂದರು.

ಮೃತಪಟ್ಟವರ ಕುಟುಂಬ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡುವಂತೆ ಕೋರಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ.
- ಆರ್‌.ವಿ. ದೇಶಪಾಂಡೆ,
ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.