ADVERTISEMENT

‘ಅಂಗವಿಕಲರು ಮುಖ್ಯವಾಹಿನಿಗೆ ಬರಲಿ’

ಕೆನರಾ ಬ್ಯಾಂಕ್‌, ರುಡ್‌ಸೆಟಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:42 IST
Last Updated 8 ಫೆಬ್ರುವರಿ 2017, 9:42 IST

ಹಳಿಯಾಳ: ‘ಅಂಗವಿಕಲರಲ್ಲಿಯೂ ಪ್ರತಿಭೆ, ವಿಶೇಷ ಸಾಮರ್ಥ್ಯ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ಕೆನರಾ ಬ್ಯಾಂಕ್‌–ದೇಶಪಾಂಡೆ ಆರ್‌ಸೆಟಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಬಲೀಕರಣ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರು ತಮ್ಮ ಜೀವನ ಕಟ್ಟಿಕೊಳ್ಳಲು ಸಮರ್ಥರಾಗಬೇಕು ಎಂಬ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಅಂಗವಿಕಲರು ನಿರಾಶರಾಗದೇ, ಎದುರಾಗುವ ಕಷ್ಟಗಳನ್ನು, ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಸಂಸ್ಥೆಯಿಂದ ಈ ವರೆಗೆ 17 ಸಾವಿರ ಬಡವರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ  ಕೈಗೊಳ್ಳುವಂತೆ ಮಾಡಲಾಗಿದೆ. 44ಕ್ಕೂ ಅಧಿಕ ತರಬೇತಿ ನೀಡಲಾಗುತ್ತಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿಯನ್ನೂ ನೀಲಾಗುತ್ತಿದೆ’ ಎಂದರು.

‘ಹಳಿಯಾಳ ವಿಧಾನಸಭಾ ಕ್ಷೇತ್ರದ ಸುಮಾರು 230 ಅಂಗನವಾಡಿಗಳಲ್ಲಿ ಖಾಸಗಿ ಸಂಸ್ಥೆಯಿಂದ ಕ್ರೀಡಾ ಸಲಕರಣೆಗಳನ್ನು ವಿತರಿಸಲಾಗಿದೆ. 2ನೇ ಹಂತದಲ್ಲಿ ಟೊಯೋಟಾ ಕಂಪೆನಿ ವತಿಯಿಂದ ಮುಂಡಗೋಡ ಹಾಗೂ ಕುಮಟಾ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಜಿಂದಾಲ್ ಕಂಪೆನಿಯ ಕೆ.ಆರ್.ರಘುನಾಥ, ಎನೆಬಲ್ ಇಂಡಿಯಾ ಸಂಸ್ಥಾಪಕ ಶಾಂತಿರಾಘವನ್, ಕೆನರಾ ಬ್ಯಾಂಕಿನ ವಲಯ ಕಚೇರಿಯ ಹಿರಿಯ ಅಧಿಕಾರಿ ವಿಷ್ಣುದಾಸ ಭಟ್ಟ  ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕಿನ 104 ಅಂಗವಿಕಲರಿಗೆ  ತ್ರಿಚಕ್ರ ವಾಹನ,  40  ಮಹಿಳೆಯರಿಗೆ ಹೊಲಿಗೆ ಯಂತ್ರ, ವಿವಿಧ  ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಟೂಲ್ಸ್ ಕಿಟ್ ವಿತರಣೆ ಮಾಡಲಾಯಿತು. ಟಿವಿಎಸ್  ಮತ್ತು ಹಿಮತ್‌ಸಿಂಗಕಾ ಗ್ರೂಪ್ ವತಿಯಿಂದ ಹಳಿಯಾಳ ಕ್ಷೇತ್ರದಲ್ಲಿ 30 ಬಸ್ ತಂಗುದಾಣಗಳ ಲೋಕಾರ್ಪಣೆ ಸಹ ನಡೆಯಿತು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಂದ್ರ ಬೆಕಲ್, ರುಡ್‌ಸೆಟಿ ಸಂಸ್ಥೆಯ ಸದಸ್ಯ ಶಾಮ ಕಾಮತ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ರೇಣಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೊರ್ವೇಕರ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಪಾಟೀಲ, ಲಕ್ಷ್ಮೀ ಕೊರ್ವೇಕರ, ರಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಪ್ರಭು ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಶ ಬೊಮ್ಮಿಗಟ್ಟಿ ನಿರೂಪಿಸಿದರು. ನಿರ್ದೇಶಕ ರವೀಂದ್ರ ರೇವಣಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.