ADVERTISEMENT

ಅಪಘಾತ: ಇಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 5:10 IST
Last Updated 21 ಸೆಪ್ಟೆಂಬರ್ 2017, 5:10 IST

ಯಲ್ಲಾಪುರ: ತಾಲ್ಲೂಕಿನ ಅರಬೈಲ್‌ನ ರಾಷ್ಟ್ರೀಯ ಹೆದ್ದಾರಿ 63ರ ಮಾರುತಿ ದೇವಸ್ಥಾನದ ತಿರುವಿನಲ್ಲಿ ಅನಿಲ ತುಂಬಿದ ಟ್ಯಾಂಕರ್ ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. 

ಗ್ಯಾಸ್ ಟ್ಯಾಂಕರ್ ಚಾಲಕ ತಮಿಳುನಾಡಿನ ಚೆಲ್ವಕಾನಿ ರಾಮಯ್ಯ ಹಾಗೂ ಲಾರಿ ಚಾಲಕ ತೇಲಂಗಾಣದ ಸೂರ್ಯ ಕೃಷ್ಣ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ಯಾಸ್ ಸೋರಿಲ್ಲ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕ್ಷಿಪ್ರಕಾರ್ಯಾಚರಣೆ ಪಡೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಗ್ಯಾಸ್ ಸೋರಿಕೆ ಆಗಿಲ್ಲ ಎಂದು ಖಚಿತಪಡಿಸಿದರು. ಬಳಿಕ ನಂತರ ಸಿಪಿಐ ಡಾ. ಮಂಜುನಾಥ ನಾಯಕ ನೇತೃತ್ವದಲ್ಲಿ ಪೊಲೀಸರು ಕ್ರೇನ್ ಬಳಸಿ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ADVERTISEMENT

‘ಮಂಗಳೂರಿನಿಂದ ತಜ್ಞರು ಹಾಗೂ ಕ್ರೇನ್ ಬಂದ ನಂತರ ಪರಿಣಿತರ ಮಾರ್ಗರ್ಶನದಲ್ಲಿ ಟ್ಯಾಂಕರ್ ತೆರವು ಮಾಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಡಿ.ಜಿ. ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ತಿರುವು ಅಗಲಗೊಳಿಸಿ’: ‘ಅಪಘಾತದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಹಿಂದೆ ನಡೆದಿದ್ದ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದರು. ಅವೈಜ್ಞಾನಿಕ ತಿರುವುಗಳಿಂದಾಗಿ ಅರೇಬೈಲ್ ಘಟ್ಟದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಮಾರುತಿ ಮಂದಿರದ ರಸ್ತೆ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು, ತಿಂಗಳಿಗೆ ಒಂದಾದರೂ ಅಫಘಾತ ಸಂಭವಿಸುತ್ತದೆ. ಹಾಗಾಗಿ, ಈ ಭಾಗದ ತಿರುವುಗಳನ್ನು ಮತ್ತಷ್ಟು ಅಗಲಗೊಳಿಸಬೇಕು. ಆಗ ಮಾತ್ರ ಅಪಘಾತಗಳು ತಗ್ಗಲಿವೆ’ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶ್ರೀಧರ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.