ADVERTISEMENT

‘ಅಪ್ಪಿಕೊ’ ಚಳವಳಿಗೆ ಮೂರೂವರೆ ದಶಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:22 IST
Last Updated 8 ಸೆಪ್ಟೆಂಬರ್ 2017, 5:22 IST
ಶಿರಸಿ ತಾಲ್ಲೂಕಿನ ಸಾಲ್ಕಣಿ ಅರಣ್ಯ ಪ್ರದೇಶದಲ್ಲಿ ಸುಂದರಲಾಲ್ ಬಹುಗುಣ ಮತ್ತು ಪಾಂಡುರಂಗ ಹೆಗಡೆ ಮರವನ್ನು ಅಪ್ಪಿಕೊಂಡು ಅಪ್ಪಿಕೊ ಚಳವಳಿಗೆ ಚಾಲನೆ ನೀಡಿದ ಸಂದರ್ಭ (ಸಂಗ್ರಹ ಚಿತ್ರ)
ಶಿರಸಿ ತಾಲ್ಲೂಕಿನ ಸಾಲ್ಕಣಿ ಅರಣ್ಯ ಪ್ರದೇಶದಲ್ಲಿ ಸುಂದರಲಾಲ್ ಬಹುಗುಣ ಮತ್ತು ಪಾಂಡುರಂಗ ಹೆಗಡೆ ಮರವನ್ನು ಅಪ್ಪಿಕೊಂಡು ಅಪ್ಪಿಕೊ ಚಳವಳಿಗೆ ಚಾಲನೆ ನೀಡಿದ ಸಂದರ್ಭ (ಸಂಗ್ರಹ ಚಿತ್ರ)   

ಶಿರಸಿ: ‘ನಾನು ಕಳಸೆಗೆ ಸೆಪ್ಟೆಂಬರ್ 23ರಂದು ಭೇಟಿ ನೀಡಿದ್ದೆ. 1983-–84ರ ಸಾಲಿನಲ್ಲಿ 151.75 ಹೆಕ್ಟೇರ್ ಪ್ರದೇಶದಲ್ಲಿನ 2 ಮೀ.ಗಿಂತ ಹೆಚ್ಚು ಸುತ್ತಳತೆಯ 590 ಮರಗಳ ಕಟಾವಿಗೆ ಗುರುತು ಮಾಡಲಾಗಿದೆ. ಇದರಲ್ಲಿ ಶ್ರೀಗಂಧ ಮತ್ತು ಬೀಟೆ ಮರಗಳು ಇಲ್ಲ. 1982-–83ರಲ್ಲಿ ಇಂಡಿಯನ್ ಪ್ಲೈವುಡ್ ಕಂಪನಿಯು 15 ಮರಗಳನ್ನು ಕಟಾವು ಮಾಡಿತ್ತು. ಎರಡು ವರ್ಷಗಳಲ್ಲಿ 161 ಹೆಕ್ಟೇರ್‌ನಲ್ಲಿರುವ 615 ಮರಗಳನ್ನು ಕತ್ತರಿಸುವ ಗುರಿ ಹೊಂದಲಾಗಿದೆ. ಮರ ಕಟಾವು ವೇಳೆ ಹಾನಿಗೊಳಗಾದ ಮರಗಳ ವಿವರವನ್ನು ಇಲಾಖೆಯವರು ನನಗೆ ಕೊಟ್ಟಿಲ್ಲ’.

ಇದು ಹಿರಿಯ ಪರಿಸರ ವಿಜ್ಞಾನಿ ಪ್ರೊ. ಮಾಧವ ಗಾಡ್ಗೀಳ್ ಅವರು ಶಿರಸಿ ವಿಭಾಗದ ಡಿಸಿಎಫ್ ಆಗಿದ್ದ ರಾಮಯ್ಯ ಅವರಿಗೆ 1983 ಸೆಪ್ಟೆಂಬರ್ 27ರಂದು ಬರೆದಿರುವ ಪತ್ರದ ಒಕ್ಕಣಿಕೆ. ತಾಲ್ಲೂಕಿನ ಹುಲೇಕಲ್ ವಲಯ ಅರಣ್ಯದಲ್ಲಿ ಇಲಾಖೆ ಮರಗಳ ಕಟಾವಿಗೆ ಮುಂದಾದಾಗ ಜನರ ನೇತೃತ್ವದಲ್ಲಿ ಮರಗಳನ್ನು ತಬ್ಬಿಕೊಂಡು ರಕ್ಷಿಸುವ ಅಪ್ಪಿಕೊ  ಚಳವಳಿ ಆರಂಭಗೊಂಡಿತು. 1983ರ ಸೆ. 8ರಂದು ಸಾಲ್ಕಣಿಯಲ್ಲಿ ಆರಂಭವಾಗಿದ್ದ ಚಳವಳಿಗೆ ಇಂದು (ಸೆ.8) 34 ವರ್ಷಾಚರಣೆಯ ಸಂಭ್ರಮ. ‘ಅಪ್ಪಿಕೊ ಚಳವಳಿ ಆರಂಭವಾಗಿದ್ದ ದಿನವನ್ನು ಹಿರಿಯ ಪರಿಸರವಾದಿ ಸುಂದರಲಾಲ್ ಬಹುಗುಣ ಅವರು ಸಹ್ಯಾದ್ರಿ ದಿನಾಚರಣೆ ಎಂದು ಕರೆದಿದ್ದರು. ಈ ಬಾರಿ ಈ ದಿನಾಚರಣೆಯನ್ನು ಮೂರು ದಿನ ಧಾರವಾಡದಲ್ಲಿ ಆಚರಿಸಲಾಗುತ್ತಿದೆ’ ಎಂದು ಚಳವಳಿಯ ನೇತೃತ್ವ ವಹಿಸಿದ್ದ ಪಾಂಡುರಂಗ ಹೆಗಡೆ ತಿಳಿಸಿದ್ದಾರೆ.

ಹಿಂದಿನ ದಿನಗಳನ್ನು ಮೆಲಕು ಹಾಕಿರುವ ಅವರು ಮಾಧವ ಗಾಡ್ಗೀಳ ಅವರ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ‘ಸಾಲ್ಕಣಿಯ ಲಕ್ಷ್ಮಿ ನರಸಿಂಹ ಯುವಕ ಮಂಡಳಿಯ ಪ್ರತಿನಿಧಿಗಳ ಪ್ರಕಾರ,ಸುಲಭವಾಗಿ ತಲುಪಬಹುದಾದ ಪ್ರದೇಶದಲ್ಲಿನ ಮರಗಳನ್ನು ಕಟಾವಿಗೆ ಆಯ್ದುಕೊಳ್ಳಲಾಗಿದೆ ಮತ್ತು ಮರ ಕಟಾವಿನ ವೇಳೆ ಹೆಚ್ಚು ಮರಗಳಿಗೆ ಹಾನಿಯಾಗಿದೆ. ಆರ್ಎಫ್ಒ ಗೋಪಾಲ್ ಅವರ ಜತೆಗೆ ತಾವು ಸ್ಥಳ ಪರಿಶೀಲನೆ ನಡೆಸಿದ್ದು, ಮರ ಕಟಾವು ವೇಳೆ ಉದ್ದೇಶಿಸಿದ್ದಕ್ಕಿಂತ ಹೆಚ್ಚು ಮರಗಳಿಗೆ ಹಾನಿಯಾಗಿದೆ. ಈ ಬಗ್ಗೆ ಯುವಕ ಮಂಡಳಿ ದೂರಿರುವುದು ಸತ್ಯವಾಗಿದೆ. ನನ್ನ ಶಿಫಾರಸುಗಳೆಂದರೆ, ಅರಣ್ಯ ಸಂರಕ್ಷಣೆಯಲ್ಲಿ ಸಾಲ್ಕಣಿಯ ಯುವ ಮಂಡಳ ಸೇರಿದಂತೆ ಎಲ್ಲ ಆಸಕ್ತರನ್ನು ಸೇರಿಸಿಕೊಳ್ಳಬೇಕು.

ADVERTISEMENT

ಯಾವ ವ್ಯಾಪ್ತಿಯಲ್ಲಿ ಎಷ್ಟು ಮರ ಕಡಿಯಲಾಗುತ್ತದೆ, ಗುತ್ತಿಗೆದಾರ ಯಾರು ಎಂಬ ವಿವರವನ್ನು ಆಸಕ್ತರಿಗೆ ತಿಳಿಸಬೇಕು. ಮರಗಳನ್ನು ಗುರುತಿಸುವ, ಕಟಾವು ಮತ್ತು ಸಾಗಣೆ ಪ್ರಕ್ರಿಯೆಯಲ್ಲಿ ಸ್ಥಳೀಯರ ನೆರವು ಪಡೆಯಬೇಕು.  ಇಂಥ ಪ್ರದೇಶಗಳಿಗೆ ಇಲಾಖೆಯ  ಹಿರಿಯ ಅಧಿಕಾರಿಗಳು ಸ್ಥಳೀಯರ ಜತೆಗೂಡಿ ಭೇಟಿ ನೀಡಬೇಕು. ಉರುವಲಿಗಾಗಿ ಮರಗಳನ್ನು ಕಡಿಯುವ ಬದಲು ಮೃತ ಮತ್ತು ಒಣಗಿದ ಮರಗಳನ್ನು ಬಳಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಮತ್ತು ಅರಣ್ಯೀಕರಣ ಪ್ರಕ್ರಿಯೆಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆಯನ್ನು ಬೆಂಬಲಿಸಬೇಕು’ ಎಂಬ ಅಂಶ ಗಾಡ್ಗೀಳ್ ಅವರ ಪತ್ರದ ಮುಂದಿನ ಭಾಗದಲ್ಲಿದೆ.

* * 

ಧಾರಾವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮತ್ತು ಸಹ್ಯಾದ್ರಿ, ಬಾಲ ಬಳಗ ಶಾಲೆಯಲ್ಲಿ ಸಹ್ಯಾದ್ರಿ ದಿನಾಚರಣೆ, ವಿದ್ಯಾವರ್ಧಕ ಸಂಘದಲ್ಲಿ ಪ್ರಕೃತಿ ಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಾಂಡುರಂಗ ಹೆಗಡೆ
ಅಪ್ಪಿಕೊ ಚಳವಳಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.