ADVERTISEMENT

ಅರಣ್ಯದಲ್ಲಿ ಸಣ್ಣ ಕೆರೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:43 IST
Last Updated 25 ಏಪ್ರಿಲ್ 2017, 5:43 IST

ಶಿರಸಿ: ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಹೇಳಿಕೆಯಿಂದ ಬೇಸರಗೊಂಡ ಪರಿಸರವಾದಿಯೊಬ್ಬರು ವನ್ಯಪ್ರಾಣಿಗಳ ಜಲದಾಹ ಇಂಗಿಸಲು ಅರಣ್ಯದ ಮಧ್ಯೆ ಇದ್ದ ಕೆರೆಯೊಳಗೆ ಕೆರೆಯೊಂದನ್ನು ನಿರ್ಮಿಸಿದ್ದಾರೆ.ಅಪ್ಪಿಕೊ ಚಳವಳಿ ಮೂಲಕ ಮನೆಮಾತಾಗಿರುವ ಪಾಂಡುರಂಗ ಹೆಗಡೆ ಅವರು ತಾಲ್ಲೂಕಿನ ಅಪ್ಪಿಕೊಪ್ಪದ ಅರಣ್ಯ ಪ್ರದೇಶದಲ್ಲಿರುವ ಚೌಡಿಕೆರೆಯ ಭಾಗಶಃ ಜಾಗದ ಹೂಳನ್ನು ₹ 1.75 ಲಕ್ಷ ವೆಚ್ಚದಲ್ಲಿ ತೆಗೆಯಿಸಿದ ಪರಿಣಾಮ ಬೇಸಿಗೆಯಲ್ಲೂ ಕೆರೆಯಲ್ಲಿ ಜಲ ನಗುತ್ತಿದೆ.

‘ಸತತ ಬರಗಾಲದಿಂದ ಕಂಗೆಟ್ಟಿರುವ ಬನವಾಸಿ ಹೋಬಳಿಯ ಪುಟ್ಟ ಹಳ್ಳಿ ಅಪ್ಪಿಕೊಪ್ಪ. ಸುತ್ತ ಕಾಡಿದ್ದರೂ ಬಿಸಿಲ ತಾಪ ಹಾಗೂ ಬರದಿಂದ ಇಲ್ಲಿ ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಕಾಡುಪ್ರಾಣಿಗಳು ನೀರಿಗಾಗಿ ಅಲೆದಾಡುವುದನ್ನು ಗಮನಿಸುತ್ತಿದ್ದೆ. ದಾಹ ತೀರಿಸಿಕೊಳ್ಳಲು ಕೃಷಿ ಜಮೀನಿಗೂ ಕೆಲ ಬಾರಿ ಬರುತ್ತಿದ್ದವು. ಅವುಗಳ ದಯನೀಯ ಸ್ಥಿತಿ ಕಂಡು ಅರಣ್ಯದಲ್ಲಿನ ಕೆರೆ ಅಭಿವೃದ್ಧಿಪಡಿಸಿದೆ. 2.5 ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತಲು ಬಹಳ ವೆಚ್ಚವಾಗುತ್ತದೆ.

ಹೀಗಾಗಿ ಕೆರೆ ಜಾಗದಲ್ಲಿಯೇ 25X25 ಅಡಿ ವಿಸ್ತೀರ್ಣದಲ್ಲಿ 10 ಅಡಿ ಆಳದ ಸಣ್ಣ ಕೆರೆಯೊಂದನ್ನು ಒಂದು ಜೆಸಿಬಿ ಹಾಗೂ ಎರಡು ಟ್ರ್ಯಾಕ್ಟರ್ ಬಳಸಿಕೊಂಡು ನಿರ್ಮಿಸಿದ್ದೇನೆ’ ಎನ್ನುತ್ತಾರೆ ಪಾಂಡುರಂಗ ಹೆಗಡೆ.‘ಕಾಡುಪ್ರಾಣಿಗಳ ನೀರಿನ ದಾಹ ತೀರಿಸಿಕೊಳ್ಳಲು ಅರಣ್ಯದ ಮಧ್ಯೆ ಕೆರೆ ನಿರ್ಮಿಸಲು ಸಾಧ್ಯವಿಲ್ಲ. ಅದರಿಂದ ಯಾವುದೇ ಆದಾಯ ಬರುವುದಿಲ್ಲ ಎಂದು ಅರಣ್ಯ ಇಲಾಖೆ ಕೆನರಾ ವೃತ್ತದ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆ ಮನಸ್ಸಿಗೆ ನೋವುಂಟು ಮಾಡಿತು. ಈ ಹೇಳಿಕೆಯೇ ನನಗೆ ಸಣ್ಣ ಕೆರೆ ನಿರ್ಮಿಸಲು ಪ್ರೇರಣೆ ನೀಡಿತು’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.