ADVERTISEMENT

‘ಆತ್ಮಹತ್ಯೆ ಸಂಖ್ಯೆಯಲ್ಲಿ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:32 IST
Last Updated 16 ಸೆಪ್ಟೆಂಬರ್ 2017, 5:32 IST

ಕಾರವಾರ: ‘ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಕಳವಳ ವ್ಯಕ್ತಪಡಿಸಿದರು. ಶುಕ್ರವಾರ ಆಯೋಜಿಸಲಾಗಿದ್ದ ‘ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಜನ್ಮ ಪಡೆಯುವ ಹಕ್ಕು ನಮದಲ್ಲ ಅಂದ ಮೇಲೆ, ಸಾಯುವ ಹಕ್ಕು ಕೂಡ ನಮಗೆ ಇಲ್ಲ. ಅವೆರಡೂ ನೈಸರ್ಗಿಕವಾಗಿಯೇ ಬರಬೇಕು. ಆಸೆಗಳು ಮಿತಿ ಮೀರಿದಾಗ, ಜೀವನದಲ್ಲಿ ಹತಾಶರಾದಾಗ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಕಂಡುಬರುತ್ತಿದೆ. ಅನುತ್ತೀರ್ಣರಾದಾಗ ಅಥವಾ ಕಡಿಮೆ ಅಂಕ ಬಂತು ಎಂದು ಯಾರೂ ಖಿನ್ನತೆಗೆ ಒಳಗಾಗಬಾರದು. ಜಗತ್ತು ಹಾಗೂ ಜೀವನ ವಿಶಾಲವಾಗಿದೆ. ಸೋಲೇ ಗೆಲು ವಿನ ಮೆಟ್ಟಿಲು ಎಂದು ಸ್ವೀಕರಿಸಿ, ಮುನ್ನ ಡೆಯಬೇಕು’ ಕಿವಿಮಾತು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಂಕರರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರತಿದಿನ ಮಾಧ್ಯಮಗಳಲ್ಲಿ ಆತ್ಮಹತ್ಯಾ ಸುದ್ದಿಗಳು ಬರುತ್ತಿವೆ. ಬ್ಲ್ಯೂವೇಲ್‌ ಆಟದ ಪ್ರಭಾವಕ್ಕೆ ಒಳಗಾಗಿ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದು ತುಂಬಾ ಕಳವಳಕಾರಿಯಾಗಿದೆ. ಮನೋಸ್ಥಿತಿ ದುರ್ಬಲವಾದಾಗ ಈ ರೀತಿಯ ನಿರ್ಧಾರಗಳನ್ನು ಮಾಡುತ್ತಾರೆ. ಈ ಬಗ್ಗೆ ಮನೋರೋಗ ತಜ್ಞರ ಬಳಿ ಆಪ್ತ ಸಮಾಲೋಚನೆ ನಡೆಸಿ, ಸುಧಾರಿಸಿಕೊಳ್ಳಬಹುದು’ ಎಂದರು.

ADVERTISEMENT

ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಸರ್ವೇಶಕುಮಾರ್ ಅವರು ‘ಒಂದು ನಿಮಿಷದ ಸಂಯಮದಿಂದ ಜೀವನ ಬದಲಿಸಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ತಾಲ್ಲೂಕು ಆರೋಗ್ಯ ಅಧಿಕಾರಿ ಸೂರಜಾ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.