ADVERTISEMENT

ಉತ್ತರ ಕನ್ನಡ ಜಿಲ್ಲೆಗೆ 4ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಮೇ 2016, 8:32 IST
Last Updated 26 ಮೇ 2016, 8:32 IST

ಕಾರವಾರ: ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆ ಶೇ 76.44ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶೇ 81.19 ರಷ್ಟು ಫಲಿತಾಂಶ ಪಡೆದು 3 ಸ್ಥಾನದಲ್ಲಿದ್ದ ಜಿಲ್ಲೆಯು ಒಂದು ಸ್ಥಾನ ಕುಸಿತ ಕಂಡಿದೆ.

ವಿದ್ಯಾರ್ಥಿನಿಯರೇ ಮೇಲುಗೈ:  ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 12,666 ಮಂದಿಯ ಪೈಕಿ 4,072 ವಿದ್ಯಾರ್ಥಿ, 6,199 ವಿದ್ಯಾರ್ಥಿನಿಯರು ಸೇರಿ ಒಟ್ಟು 9,682 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕರಿಗಿಂತ (ಶೇ 60.02) ಬಾಲಕಿಯರು ಶೇ 74.91 ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.  ಕಲಾ ವಿಭಾಗದಲ್ಲಿ ಶೇ 67, ವಾಣಿಜ್ಯ ವಿಭಾಗದಲ್ಲಿ ಶೇ 82.21 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 78.19ರಷ್ಟು ಫಲಿತಾಂಶ ಬಂದಿದೆ. ಗ್ರಾಮಾಂತರ ಭಾಗಕ್ಕೆ ಶೇ 75.21 ಫಲಿತಾಂಶ ಬಂದರೆ, ನಗರ ಪ್ರದೇಶಕ್ಕೆ ಶೇ 76.86 ಫಲಿತಾಂಶ ದೊರೆತಿದೆ.

ದೇಶಪಾಂಡೆ ಸಂತಸ: ‘ಪ್ರಸಕ್ತ ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ 4ನೇ ಸ್ಥಾನ ಗಳಿಸಿರುವ ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಾಧನೆ ತಿಳಿದು ನನಗೆ ಸಂತಸವಾಗಿದೆ. ಆದರೆ ಇದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಜಿಲ್ಲೆ ಸಾಧನೆ ಹಿಂದೆಲ್ಲಾ ರಾಜ್ಯದಲ್ಲೇ ಇನ್ನೂ ಮುಂಚೂಣಿಯಲ್ಲಿರುತ್ತಿದ್ದವು. ಈ ಪರಂಪರೆಯನ್ನು ಮುಂದೆಯೂ ನಾವು ಕಾಯ್ದುಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

‘ಶೈಕ್ಷಣಿಕ ಸಾಧನೆಯಲ್ಲಿ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ. ಅವರಿಗೆ ಮಾರ್ಗದರ್ಶನ ನೀಡುವ ಉಪನ್ಯಾಸಕರ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೂ ಅಷ್ಟೇ ಮುಖ್ಯ. ಹೀಗಾಗಿ ನಮ್ಮ ಜಿಲ್ಲೆಯ ಉಜ್ವಲ ಶೈಕ್ಷಣಿಕ ಪರಂಪರೆಯನ್ನು ಎತ್ತಿ ಹಿಡಿಯಲು ನಮ್ಮ ಉಪನ್ಯಾಸಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಶೀಲರಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸೋಣ’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಶಿವಾಜಿ ಸಂಯುಕ್ತ ಪಿಯು ಕಾಲೇಜಿಗೆ ಶೇ 91 ಫಲಿತಾಂಶ:  ತಾಲ್ಲೂಕಿನ ಸದಾಶಿವಗಡದ ಶಿವಾಜಿ ಸಂಯುಕ್ತ ಪದವಿಪೂರ್ವ ಕಾಲೇಜು ಶೇ 91ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಕುಳಿತಿದ್ದ 134 ವಿದ್ಯಾರ್ಥಿಗಳಲ್ಲಿ 121 ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ನಾಲ್ವರು ಉನ್ನತ ಶ್ರೇಣಿ, 41 ಮಂದಿ ಪ್ರಥಮ ಶ್ರೇಣಿ, 50 ಮಂದಿ ದ್ವಿತೀಯ ಶ್ರೇಣಿ, 26 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಅಂಕಿತಾ ರಾಯ್ಕರ (ಶೇ 91) ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾಳೆ. ದೀಕ್ಷಾ ಕೊಳಂಬಕರ (ಶೇ 90.16), ಸೊನಾಲಿ ಬಾಂದೇಕರ (ಶೇ 88.83) ಮೂರನೇ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.