ADVERTISEMENT

ಉತ್ತರ-,ದಕ್ಷಿಣ ಬೆಸೆದ ವೈವಾಹಿಕ ಸಂಬಂಧ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸು.ರಾಮಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:33 IST
Last Updated 26 ಏಪ್ರಿಲ್ 2018, 11:33 IST

ಯಲ್ಲಾಪುರ : ವೈವಾಹಿಕ ಸಂಸ್ಕಾರವೇ ಒಂದು ವೃತ್ತದಂತೆ. ಭಾರತೀಯ ಪರಂಪರೆಯಲ್ಲಿ ವಧು-ವರ ಎಂದರೆ ಲಕ್ಷ್ಮಿ ನಾರಾಯಣರಂತೆ ಪರಿಭಾವಿಸುವ ಸಂಪ್ರದಾಯ ಬೆಳೆದು ಬಂದಿದೆ. ಉತ್ತರ ಭಾಗದ ಬಲರಾಮಪುರದ ಕನ್ಯೆ ಮತ್ತು ದಕ್ಷಿಣದ ವರ ಸೇರಿ ಇಡೀ ಭಾರತವನ್ನೇ ವೈವಾಹಿಕದ ಸಂಬಂಧದ ಮೂಲಕ ಗಾಢವಾಗಿ ಬೆಸೆದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸು.ರಾಮಣ್ಣ ಹೇಳಿದರು.

ತಾಲ್ಲೂಕಿನ ವಜ್ರಳ್ಳಿ ನಡಿಗೆಮನೆಯ ತ್ರಿವೇಣಿ ಮತ್ತು ಶಂಕರನಾರಾಯಣ ದಂಪತಿಯ ಪುತ್ರ ಬಾಲಚಂದ್ರ ಮತ್ತು ನೇಪಾಳ ಸಮೀಪದ ಬಲರಾಮಪುರದ ರೇಣುಕಾ ಮತ್ತು ಅನಿಲಕುಮಾರ ಮಿಶ್ರಾ ದಂಪತಿಯ ಪುತ್ರಿ ಹರ್ಷಿತಾ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿವಾಹದಲ್ಲಿ ಹಿರಿಯರಿಂದ ಆಶೀರ್ವಾದ ಪಡೆದಾಗ ಅಗಾಧ ಶಕ್ತಿ ಇರುತ್ತದೆ. ಹಾಗಾಗಿಯೇ ಅಂಥ ಸಂಸ್ಕಾರ ಸಂಸ್ಕಾರ ಬೆಳೆದು ಬಂದಿದೆ ಎಂದರು.

ADVERTISEMENT

ಸ್ವರ್ಣವಲ್ಲಿ ಶ್ರೀಗಳ ಆಶಯದಂತೆ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸಂಬಂಧ ಬೆಳೆಸುವಲ್ಲಿ ವೈವಾಹಿಕ ಸಂಬಂಧ ಕಾರಣವಾಗಿದೆ ಎಂದ ಅವರು, ನಾವು ಸುಖ, ದುಃಖವನ್ನು ಸಮನಾಗಿ ಸ್ವೀಕರಿಸಬೇಕು. ಸ್ವದೇಶಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.

ಸಪ್ತಪದಿ ಸಂಸ್ಥೆಯ ಸಂಚಾಲಕ ವೆಂಕಟರಮಣ ಬೆಳ್ಳಿ ಮಾತನಾಡಿ, ಸಪ್ತಪದಿ ಸಂಸ್ಥೆಯ ಆಶ್ರಯದಲ್ಲಿ 15 ನೇ ಲಗ್ನ ಇದಾಗಿದೆ. ನೇಪಾಳ ಗಡಿಯ ಹರ್ಷಿತಾ ಮಿಶ್ರಾ ನಮ್ಮವರಾಗಿದ್ದಾರೆ. ಎರಡೂವರೆ ಸಾವಿರ ಕಿ.ಮೀ. ದೂರದ ವಧು, ತಮ್ಮ ಬಂಧು ಬಳಗ ಬಿಟ್ಟು ನಮ್ಮ ಬಳಗ ಸೇರಿದ್ದಾರೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಎಂದರು.

ಸಪ್ತಪದಿ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಹೆಗಡೆ ಗೇರಾಳ, ಸದಸ್ಯರಾದ ಡಿ.ಶಂಕರ ಭಟ್ಟ, ಶಂಕರ ಭಟ್ಟ ತಾರೀಮಕ್ಕಿ, ಮಾಧವ ಕೋಟೆಮನೆ ಮತ್ತಿತರರು ಉಪಸ್ಥಿತರಿದ್ದರು.

ಗಾಯಕ ಸುಧಾಮ ದಾನಗೇರಿ ಪ್ರಾರ್ಥನೆ ಹಾಡಿದರು, ರಾಷ್ಟ್ರೀಯ ಸೇವಾ ಸಂಘದ ಪ್ರಮುಖ ದತ್ತಾತ್ರೇಯ ಭಟ್ಟ ನಡಿಗೆಮನೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.