ADVERTISEMENT

ಉದ್ಯಮಿಗಳ ಪಟ್ಟಿ: ಸೈಯದ್‌ಗೆ 42ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:47 IST
Last Updated 25 ಮೇ 2017, 9:47 IST

ಭಟ್ಕಳ: ಫೋರ್ಬ್ ನಿಯತಕಾಲಿಕ ಪ್ರಕಟಿಸಿದ ಅರಬ್ ರಾಷ್ಟ್ರಗಳ 50 ಪ್ರಭಾವಿ ಭಾರತೀಯ ಉದ್ಯಮಿಗಳ ಪಟ್ಟಿಯಲ್ಲಿ ಭಟ್ಕಳ ಮೂಲದ ಉದ್ಯಮಿ ಎಸ್.ಎಂ ಸೈಯದ್ ಮುಷ್ತಾಕ್ ಮಸೂದ್‌ 42ನೇ ಸ್ಥಾನ ಪಡೆದು ಕೊಂಡಿದ್ದಾರೆ.

ಇವರು ಮೌಲಾನಾ ಲುಂಗಿಯನ್ನು ಜಗತ್ತಿಗೆ ಪರಿಚಯಿಸಿದ, ಮೌಲಾನಾ ಲುಂಗೀಸ್‌ನ ನಿರ್ದೇಶಕ ಹಾಗೂ ಮೀಟಾಲೆಕ್ಸ್ ಏಜೆನ್ಸೀಸ್ ಎರ್ನಾಕುಲಂ ಇದರ ಪಾಲುದಾರ ಎಸ್.ಎಂ ಸೈಯದ್‌ ಅವರ ಪುತ್ರ. ಸಿ.ಎ ಓದಿರುವ ಮುಷ್ತಾಕ್ ಮಸೂದ್ ಪ್ರಸ್ತುತ ಫೈನಾನ್ಸಿಯಲ್ ಇಂಡಸ್ಟ್ರಿಯಲ್ ಹಾಗೂ ರಿಯಲ್ ಎಸ್ಟೇಟ್‌ಗೆ ಹೆಸರಾಗಿರುವ ದುಬೈ ಇನ್ವೆಸ್ಟ್‌ಮೆಂಟ್ ಗ್ರೂಪ್ ಪಿಜೆಎಸ್ಸಿಯ ಸಿಎಫ್ಓ ಆಗಿ ಕೆಲಸ  ಮಾಡುತ್ತಿದ್ದಾರೆ.

ಈ ಕಂಪೆನಿಯ ಸಂಪೂರ್ಣ ಹಣಕಾಸು ವ್ಯವಹಾರವನ್ನು ನೋಡಿ ಕೊಳ್ಳುತ್ತಿರುವ ಮಸೂದ್ ತನ್ನ ಪ್ರತಿಭೆ ಯನ್ನೆಲ್ಲವನ್ನೂ ಧಾರೆ ಎರೆದು ಕಂಪನಿ ಯನ್ನು ಉತ್ತುಂಗಕ್ಕೇರಿಸಿದ್ದಲ್ಲದೇ, ಇದರ ಉಪ ಸಂಸ್ಥೆಗಳಾದ ಅಲ್ ಮಾಲ್ ಕ್ಯಾಪಿಟೆಲ್ ಪಿಎಸ್ಸಿ ಇದರ ಬೋರ್ಡ್‌ ಆಫ್‌ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮುಷ್ತಾಕರ ಉತ್ತಮ ಕಾರ್ಯ ವೈಖರಿಯನ್ನು ಪರಿಗಣಿಸಿ ಪೋರ್ಬ್ಸ್ ಮಧ್ಯಪೂರ್ವ ನಿಯತಕಾಲಿಕ ಮಸೂದ್‌ಗೆ ತನ್ನ 50 ಜನರ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.

ಸೈಯದ್ ಮಸೂದ್ ಕೇರಳದ ಎರ್ನಾಕುಲಂನ ಸೆಂಟ್ ಆಲ್ಬರ್ಟ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದಿದ್ದು, ಸ್ಥಾನೀಯ ಆಡಿಟ್ ಪೋರಂನೊಂದಿಗೆ ಸೇರಿ 1989ರಲ್ಲಿ ಸಿ. ಎ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಉದ್ಯೋಗಕ್ಕಾಗಿ ದುಬೈ ಹಾದಿ ಹಿಡಿದ ಅವರು, ಮುಟ್ಟಿದ್ದೆಲ್ಲ ಚಿನ್ನವನ್ನೇ ಕಂಡಿದ್ದಾರೆ. ಅಲ್ಲಿ ಆರ್ಥರ್ ಯಂಗ್ ಮತ್ತು ಆರ್ಥರ್ ಎಂಡರ್ಸನ್ ಕಂಪೆನಿಯಲ್ಲಿ ಆಡಿಟರ್ ಆಗಿ ನೇಮಕಗೊಂಡರು.

1992ರಲ್ಲಿ ಅಬುದಾಬಿಗೆ ಸ್ಥಳಾಂತರ ಗೊಂಡ ಇವರು ಅಲ್ಲಿನ ಪ್ರಸಿದ್ಧ ಪೆಟ್ರೋಲಿಯಂ ಕಂಪೆನಿ ಆಡ್ನೋಕ್ ಡಿಸ್ಟ್ರಿಬ್ಯೂಶನ್‌ನಲ್ಲಿ ಆಂತರಿಕ ಆಡಿಟರ್ ಹುದ್ದೆಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರು.

1999ರಲ್ಲಿ ಕುಪೋಲಾ ಗ್ರೂಪ್ ಸೇರ್ಪಡೆಯ ಮೂಲಕ ಆಡಿಟಿಂಗ್‌ನಿಂದ ಫೈನಾನ್ಶ್ ವಿಭಾಗಕ್ಕೆ ವರ್ಗಾವಣೆಗೊಂಡು ನಂತರ ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾದಲ್ಲಿ ಅಬರಾಯ್ ಕ್ಯಾಪಿಟೆಲ್‌ನೊಂದಿಗೆ ಗುರುತಿಸಿಕೊಂಡರು.

ಕೆಲಸದಲ್ಲಿ ಅವರು ಹೊಂದಿದ್ದ ಶ್ರದ್ಧೆ ಮತ್ತು ಪ್ರಾಮಾಣಿಕತೆ ಅವರನ್ನು ಪ್ರಖ್ಯಾತ ದುಬೈ ಇನ್ವೆಸ್ಟ್‌ಮೆಂಟ್‌ಗೆ ಕರೆ ತಂದಿರುವುದರಲ್ಲಿ ಉಲ್ಲೇಖನಾರ್ಹ. ಇವರ ಈ ಸಾಧನೆಯಿಂದಾಗಿ ಭಟ್ಕಳಕ್ಕೆ ಇನ್ನೊಂದು ಹಿರಿಮೆಯ ಗರಿ ಮುಡಿಗೇರಿದಂತಾಗಿದೆ. ‘ಪೋರ್ಬ್ಸ್ ನಿಯತಕಾಲಿಕ ನನಗೆ ಸ್ಥಾನ ನೀಡಿದ್ದು ಜೀವನದ ಅತ್ಯಂತ ಸಂತಸದ ಕ್ಷಣಗಳಲ್ಲೊಂದು’ ಎಂದು ಮಸೂದ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.