ADVERTISEMENT

ಎರಡು ಜಿಲ್ಲೆಯ ದೋಣಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:56 IST
Last Updated 4 ಮಾರ್ಚ್ 2017, 6:56 IST

ಕಾರವಾರ: ಇಲ್ಲಿನ ಕಡಲ ತೀರದಲ್ಲಿ ಕಳೆದ 28ರಂದು ಮಂಗಳೂರಿನ ಬುಲ್ ಟ್ರಾಲ್ ದೋಣಿಯೊಂದು ತಾಲ್ಲೂಕಿನ ದೋಣಿಗೆ ಡಿಕ್ಕಿ ಹೊಡೆದಿದ್ದು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ನಡುವೆ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ತಾಲ್ಲೂಕಿನ ಮಾಜಾಳಿಯ ವಿಷ್ಣು ಚೋಪಡೇಕರ್ ಎನ್ನುವವರು ನಾಡದೋಣಿ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕ ಅಶ್ವಶಕ್ತಿಯುಳ್ಳ ಮೀನುಗಾರಿಕಾ ಬೋಟ್ ಡಿಕ್ಕಿ ಹೊಡೆದಿದೆ. ಆಳ ಸಮುದ್ರದಲ್ಲಾದ ಡಿಕ್ಕಿ ರಭಸಕ್ಕೆ ನಾಡದೋಣಿ ಸಂಪೂರ್ಣ ಹಾನಿಯಾಗಿದ್ದು, ಅಪಘಾತದಿಂದ ಸಮುದ್ರದ ಮಧ್ಯೆ ಅಪಾಯದಲ್ಲಿ ಸಿಲುಕಿದ್ದ ದೋಣಿಯಲ್ಲಿದ್ದ ಮೀನುಗಾರರು ಕಷ್ಟಪಟ್ಟು ದಡ ಸೇರಿದ್ದಾರೆ.

ಈ ಘಟನೆಯಿಂದ ರೊಚ್ಚಿಗೆದ್ದಿರುವ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯ ಮೀನುಗಾರರು ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರ ವಿರುದ್ದ ಪ್ರತಿಭಟನೆಗೆ ಇಳಿದಿದ್ದು, ಅಧಿಕ ಅಶ್ವಶಕ್ತಿ ಇಂಜಿನ್ ಬಳಸಿ ಮೀನುಗಾರಿಕೆ ಮಾಡುವುದನ್ನ ಜಿಲ್ಲಾ ವ್ಯಾಪ್ತಿಯ ಆಳ ಸಮುದ್ರದಲ್ಲಿ ನಿಲ್ಲಿಸುವವರೆಗೆ ಮೀನುಗಾರಿಕೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮೀನುಗಾರರ ಸಂಘದ ಅಧ್ಯಕ್ಷ ಗಣಪತಿ ಮಾಂಗ್ರೆ, ಅಧಿಕ ಅಶ್ವಶಕ್ತಿಯುಳ್ಳ ಇಂಜಿನ್ ಬಳಸಿ ಮೀನುಗಾರಿಕೆ ಮಾಡುವುದರಿಂದ ಸಣ್ಣಪುಟ್ಟ ಮೀನಿನ ಮರಿಗಳು ಬಲೆಗೆ ಸಿಲುಕುವುದರಿಂದ ಮೀನಿನ ಸಂತತಿಯ ಮೇಲೆ ಸಹ ಪರಿಣಾಮ ಬೀಳುತ್ತದೆ.

ಅಲ್ಲದೇ ದೊಡ್ಡ ಎಂಜಿನ್ ದೋಣಿ ಗಳಿಗೆ ಅಧಿಕ ಮೀನುಗಳು ಒಮ್ಮೆಯೇ ಬೀಳುವುದರಿಂದ ಇತರ ಮೀನುಗಾರರಿಗೆ ಮತ್ಸ್ಯಕ್ಷಾಮ ಎದುರಾಗಿ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಸದ್ಯ ಎರಡು ಜಿಲ್ಲೆಯ ಮೀನುಗಾರರು ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರವೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಮೀನುಗಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT