ADVERTISEMENT

ಏರಿದ ದರದಿಂದ ಕಹಿಯಾದ ಮಾವು

ಮಾರುಕಟ್ಟೆಗೆ ಲಗ್ಗೆಯಿಟ್ಟ ಹಣ್ಣಿನ ರಾಜ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:21 IST
Last Updated 16 ಏಪ್ರಿಲ್ 2018, 9:21 IST

ಮುಂಡಗೋಡ: ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಕಾಲಿಟ್ಟಿದ್ದು, ದರ ಗಗನಕ್ಕೇರಿದೆ. ಹಿಂಗಾರು ಪರಿಣಾಮದಿಂದ ಇಳುವರಿ ತಡವಾಗಿ ಬಂದಿದೆ. ಈವರೆಗೆ ಶೇ 25ರಷ್ಟು ಮಾತ್ರ ಕಾಯಿ ಇಳಿಸುವ ಕಾರ್ಯ ನಡೆದಿದೆ.

ತಾಲ್ಲೂಕಿನಲ್ಲಿ ಸುಮಾರು 2700 ಹೆಕ್ಟೇರ್‌ ಮಾವಿನ ಕ್ಷೇತ್ರವಿದೆ. ಪಾಳಾ ಹೋಬಳಿಯಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆಫೂಸ್‌, ಪೈರಿ ಜಾತಿಯ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಪಾಳಾ, ಕಲಕೊಪ್ಪ, ಕೋಡಂಬಿ, ಓಣಿಕೇರಿ, ಭದ್ರಾಪುರ ಸೇರಿ ಗಡಿಭಾಗದ ಕೊಮ್ಮರಸಿಕೊಪ್ಪ, ಗಾಜಿಪುರ ಕಡೆ ಬೆಳೆದ ಹಣ್ಣುಗಳು ಪಾಳಾ ಮಾರುಕಟ್ಟೆಗೆ ಬರುತ್ತಿವೆ. ಉಳಿದಂತೆ ಮುಂಡಗೋಡ ಹೋಬಳಿಯಲ್ಲಿ ಬೆಳೆದ ಹಣ್ಣುಗಳು ಹುಬ್ಬಳ್ಳಿ ಮಾರುಕಟ್ಟೆಗೆ ಹೋಗುತ್ತವೆ.

ಪಾಳಾ ರಸ್ತೆ ಬದಿಯಲ್ಲಿ ಮಾವು ಮಾರಾಟ ಆರಂಭವಾಗಿದ್ದು, ಹಣ್ಣುಗಳ ರಾಜ ಪ್ರಯಾಣಿಕರನ್ನು ಸೆಳೆಯುತ್ತಿದೆ. ಆದರೆ, ದರ ಮಾತ್ರ ಹಣ್ಣು ಕಹಿಯಾಗುವಂತೆ ಮಾಡುತ್ತಿದೆ. ಪ್ರತಿ ಕೆ.ಜಿ.ಗೆ ಆಫೂಸ್‌ ಹಣ್ಣು ₹150–170 ದರವಿದೆ. ಸಣ್ಣ ಗಾತ್ರದ ಹಣ್ಣು ₹10.20 ಇದೆ.

ADVERTISEMENT

‘ಕಳೆದ ಒಂದು ವಾರದಿಂದ ಹಣ್ಣುಗಳ ಮಾರಾಟ ಆರಂಭವಾಗಿದೆ. ಬೇಡಿಕೆಗಿಂತ ಕಡಿಮೆಯಿರುವುದರಿಂದ ಮೊದಲಿಗೆ ದರ ಹೆಚ್ಚಾಗಿದೆ. ದಿನಕಳೆದಂತೆ ದರದಲ್ಲಿ ಇಳಿಕೆಯಾಗಬಹುದು. ಈ ವರ್ಷ ಇಳುವರಿ ಸಾಧಾರಣವಾಗಿದ್ದು, ತೋಟದಲ್ಲಿರುವ ಕಾಯಿಗಳು ಪಕ್ವಗೊಂಡು ಸಂಪೂರ್ಣವಾಗಿ ಮಾಗಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ. ತೋಟದಲ್ಲಿ ಇನ್ನೂ ರೂಪಾಯಿದಾಗ ಹನ್ನೆರಡಣೆಯಷ್ಟು ಕಾಯಿಗಳಿವೆ. ಈ ವರ್ಷ ಜೂನ್‌ವರೆಗೆ ಮಾವು ಮಾರಾಟ ಮಾಡಬಹುದಾಗಿದೆ. ವಾಡಿಕೆಗಿಂತ ಹದಿನೈದು ದಿನಗಳು ತಡವಾಗಿ ಮಾವು ಮಾರುಕಟ್ಟೆಗೆ ಬಂದಿದೆ’ ಎಂದು ಮಾವು ವ್ಯಾಪಾರಸ್ಥ ಮಹ್ಮದ ಗೌಸ್‌ ಪಾಟೀಲ್ ಹೇಳಿದರು.

‘ಕಳೆದ ನಾಲ್ಕೈದು ದಿನಗಳಿಂದ ಪಾಳಾ ಮಾರುಕಟ್ಟೆಯಲ್ಲಿ ಪ್ರತಿ ದಿನ ಸಂಜೆ ಮಾವಿನ ಲಿಲಾವು ನಡೆಯುತ್ತದೆ. ಇಲ್ಲಿಯವರೆಗೆ ಪ್ರತಿ ಕೆ.ಜಿ.ಗೆ ₹110–125ರವರೆಗೆ ಮಾರಾಟವಾಗಿದೆ. ದಿನಕಳೆದಂತೆ ಹೆಚ್ಚು ಮಾವು ಬರಲಿದೆ. ಮಾವಿನ ಜ್ಯೂಸ್‌ ತಯಾರಕ ಕಂಪನಿ ಪ್ರತಿನಿಧಿಗಳು ಇಲ್ಲಿಯ ಮಾವನ್ನು ಖರೀದಿಸಲು ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾವಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ’ ಎಂದು ಹಾನಗಲ್‌ನ ವ್ಯಾಪಾರಿ ಮುಷ್ತಾಕ್ ಅಹ್ಮದ ಬಾಳೂರ ಹೇಳಿದರು.

‘ರಫ್ತು ಮಾಡಲು ಹಣ್ಣಿನ ಗುಣಮಟ್ಟ, ಬಣ್ಣ,ಬಾಳಿಕೆ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸುತ್ತಾರೆ. ಒಂದು ವೇಳೆ ಯಾವುದೋ ಒಂದು ಬಾಕ್ಸ್‌ನಲ್ಲಿರುವ ಹಣ್ಣು ತಿರಸ್ಕೃತಗೊಂಡರೆ ಇನ್ನುಳಿದ ಬಾಕ್ಸ್‌ಗಳ ಹಣ್ಣುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಇಲ್ಲಿಯ ಹಣ್ಣು ಜ್ಯೂಸ್‌ ತಯಾರಿಕೆಗೆ ಸೂಕ್ತವಾಗಿರುವುದರಿಂದ ಪಾಳಾ ಭಾಗದ ಹಣ್ಣುಗಳನ್ನು ಕಂಪನಿಯವರು ಖರೀದಿಸುತ್ತಾರೆ’ ಎಂದರು.

‘ಸತತವಾಗಿ ಎರಡು ಮೂರು ದಿನಗಳು ಮಳೆಯಾದರೆ ಮಾವಿನ ಕಾಯಿಯ ಸಣ್ಣ ರಂಧ್ರದಲ್ಲಿ ನೀರು ಹೋಗಿ, ಕೊಳೆಯುತ್ತದೆ. ಆಲಿಕಲ್ಲು ಮಳೆಯಾದರೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತದೆ. ತಾಲ್ಲೂಕಿನ ಆಲ್ಫೆನ್ಸೊ ಹಣ್ಣಿಗೆ ಹೆಚ್ಚು ಬೇಡಿಕೆಯಿದೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ ನಾಗಾರ್ಜುನ ಗೌಡ ಹೇಳಿದರು.

ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.