ADVERTISEMENT

ಐತಿಹಾಸಿಕ ‘ಬೆಲ್ಸ್ ಬಂಗಲೆ’ಗೆ ಮರುಜೀವ

ಹಾಳಾದ ಕಟ್ಟಡ: ಪುನರ್‌ ನಿರ್ಮಾಣಕ್ಕೆ ಮುಂದಾದ ಸರ್ಕಾರ: ₹ 1ಕೋಟಿ ಅನುದಾನ ಬಿಡುಗಡೆ

ಪಿ.ಕೆ.ರವಿಕುಮಾರ
Published 6 ಮಾರ್ಚ್ 2017, 12:40 IST
Last Updated 6 ಮಾರ್ಚ್ 2017, 12:40 IST
ಐತಿಹಾಸಿಕ ‘ಬೆಲ್ಸ್ ಬಂಗಲೆ’ಗೆ ಮರುಜೀವ
ಐತಿಹಾಸಿಕ ‘ಬೆಲ್ಸ್ ಬಂಗಲೆ’ಗೆ ಮರುಜೀವ   
ಕಾರವಾರ: ಇಲ್ಲಿನ ಐತಿಹಾಸಿಕ ಬೆಲ್ಸ್‌ ಬಂಗಲೆ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಇದರ ಪುನರ್‌ ನಿರ್ಮಾಣಕ್ಕೆ ಸರ್ಕಾರ ಇದೀಗ ₹ 1ಕೋಟಿ ಅನುದಾನ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ಈ ಬಂಗಲೆಯನ್ನು ಬ್ರಿಟಿಷ್‌ ಮಾದರಿಯಲ್ಲೇ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. 
 
ಅಲಿಗದ್ದಾ ಸಮೀಪದ ಗುಡ್ಡದಲ್ಲಿರುವ ಕೆಡಿಸಿಸಿ ಸಂಸ್ಥೆ ಬಳಿಯಲ್ಲಿ ಈ ಬಂಗಲೆ ಇದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸದ್ಯ ಪಾಳುಬಿದ್ದಿದೆ. ಇಲ್ಲಿನ ಬಾಗಿಲು, ಕಿಟಕಿಗಳು ಹಾಳಾಗಿದ್ದು, ಮರದ ವಸ್ತುಗಳು ಬಳಕೆಗೆ ಬಾರದಾಗಿದೆ. ಮೇಲ್ಛಾವಣಿ ಕೂಡ ಗಟ್ಟಿಮುಟ್ಟಾಗಿಲ್ಲ. ಆಂಗ್ಲರು ಇಲ್ಲಿ ಆಡಳಿತ ನಡೆಸಿದ್ದರು ಎನ್ನುವುದಕ್ಕೆ ಈ ಕಟ್ಟಡ ಸಾಕ್ಷಿಯಾಗಿದೆ. 
 
ಕಟ್ಟಡಕ್ಕೆ ಬ್ರಿಟಿಷ್‌ ಅಧಿಕಾರಿ ಹೆಸರು 
ಬ್ರಿಟಿಷ್ ಆಳ್ವಿಕೆಯಲ್ಲಿ ಕಾರವಾರ ಪ್ರಾಂತವನ್ನು ನೋಡಿಕೊಳ್ಳುತ್ತಿದ್ದ ಪ್ರಾಂತಮಟ್ಟದ ಅಧಿಕಾರಿ ಬೆಲ್ಸ್ ಅವರ ವಾಸ್ತವ್ಯದ ಸಲುವಾಗಿ ಈ ಬಂಗಲೆಯನ್ನು ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಈಗಲೂ ಈ ಕಟ್ಟಡವನ್ನು ‘ಬೆಲ್ಸ್ ಬಂಗಲೆ’ ಎಂದೇ ಕರೆಯಲಾಗುತ್ತದೆ. ಈ ಬಂಗಲೆ ಯಾವ ವರ್ಷ ನಿರ್ಮಾಣವಾಯಿತು ಎಂಬ ಬಗ್ಗೆ ಸ್ಪಷ್ಟ ದಾಖಲೆಯಿಲ್ಲ. ಆದರೆ 1949 ರಲ್ಲಿ ₹ 39,264 ಹಣಕ್ಕೆ ಈ ಬಂಗ್ಲೆಯನ್ನು ಖರೀದಿಸಿದ ಬಗ್ಗೆ ಮಾತ್ರ ಪಿಡಬ್ಲ್ಯುಡಿ ಇಲಾಖೆಯಲ್ಲಿ ದಾಖಲೆ ಇದೆ. ಆದರೆ ನಿರ್ವಹಣೆ ಮಾಡದ ಕಾರಣ ಕಾಲಾನಂತರ ಈ ಕಟ್ಟಡ ಪಾಳುಬಿತ್ತು.
 
ಸ್ಥಳ ಗುರುತು  
ಉದ್ದೇಶಿತ ಹೊಸ ಕಟ್ಟಡ ನಿರ್ಮಾಣಕ್ಕೆ ಈಗಿನ ಬಂಗಲೆ ಸಮೀಪದಲ್ಲೇ ಜಾಗ ಗುರುತಿಸಲಾಗಿದೆ. ಗುಡ್ಡದ ಮೇಲಿರುವ ಈ ಬಂಗಲೆಯ ಕಟ್ಟಡದ ಬಳಿ ನಿಂತು ನೋಡಿದರೆ ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಸೊಬಗು ನಿಬ್ಬೆರಗು ಗೊಳಿಸುತ್ತದೆ. ಸಂಜೆ ವೇಳೆ ಬೀಸುವ ತಂಪಾದ ಗಾಳಿ ಆಹ್ಲಾದಕರ ವಾಗಿರುತ್ತದೆ. ಹೀಗಾಗಿಯೇ ಬ್ರಿಟಿಷ್ ಅಧಿಕಾರಿ ಬೆಲ್ಸ್ ಎಂಬುವರು ಇಲ್ಲಿ ಬಂಗಲೆ ನಿರ್ಮಿಸಿಕೊಂಡು ತಂಗಿದ್ದರು ಎನಿಸುತ್ತದೆ. 
 
‘ಬೆಲ್ಸ್ ಬಂಗಲೆ  ನಿರ್ಮಾಣವಾಗಿ ಸುಮಾರು 100 ವರ್ಷ ಕಳೆದಿರ ಬಹುದು. ಮೇಲ್ಚಾವಣಿ, ಕಿಟಕಿಗಳು, ಗೋಡೆಗಳು ದುಃಸ್ಥಿತಿ ತಲುಪಿವೆ. ಐದಾರು ವರ್ಷಗಳ ಹಿಂದೆ ಈ ಬಂಗಲೆಯನ್ನು ದುರಸ್ತಿ ಮಾಡುವ ಯತ್ನ ನಡೆದಿತ್ತು. ಅದಕ್ಕೆ ಸರ್ಕಾರದ ಅನುಮತಿ ದೊರೆಯದ ಕಾರಣ ಅಷ್ಟಕ್ಕೇ ಬಿಡಲಾಗಿತ್ತು. ಇದರ ದುರಸ್ತಿ ಬದಲು ಪಕ್ಕದಲ್ಲಿ ಪ್ರತ್ಯೇಕ ಸರ್ಕ್ಯೂಟ್‌ ಹೌಸ್ ಒಂದನ್ನು ನಿರ್ಮಿಸಲಾಯಿತು.

ಬೆಲ್ಸ್ ಬಂಗಲೆ ಅತ್ಯಂತ ಹಳೆಯ ದ್ದಾಗಿದ್ದು, ದುರಸ್ತಿಗೆ ಸಾಧ್ಯವಿಲ್ಲ. ಹೀಗಾಗಿ ಹಳೆ ಬಂಗಲೆಯನ್ನು ಕೆಡವಿ ಹೊಸದಾಗಿ ಅದೇ ಮಾದರಿಯಲ್ಲಿ ಕಟ್ಟಲು ತೀರ್ಮಾನಿಸಲಾಗಿದೆ. ನುರಿತ ಎಂಜಿನಿಯರ್‌ ಸಹಾಯದೊಂದಿಗೆ ಕಟ್ಟಡಕ್ಕೆ ನೀಲಿನಕ್ಷೆ ತಯಾರಿಸಿ ಟೆಂಡರ್ ಕರೆಯಲಾಗುವುದು’ ಎಂದು ಲೋಕೋ ಪಯೋಗಿ ಇಲಾಖೆಯ  ಎಂಜಿನಿಯರ್‌ ಸತ್ಯನಾರಾಯಣ  ತಿಳಿಸಿದರು.
 
* ಬಂಗಲೆಯ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ
-ಸತ್ಯನಾರಾಯಣ,, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.