ADVERTISEMENT

ಓಡಾಡುವ ವಿಜ್ಞಾನ ಪ್ರಯೋಗಾಲಯ

ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ವಿನೂತನ ಪ್ರಯೋಗ

ಸಂಧ್ಯಾ ಹೆಗಡೆ
Published 3 ಫೆಬ್ರುವರಿ 2017, 6:40 IST
Last Updated 3 ಫೆಬ್ರುವರಿ 2017, 6:40 IST
ಓಡಾಡುವ ವಿಜ್ಞಾನ ಪ್ರಯೋಗಾಲಯ
ಓಡಾಡುವ ವಿಜ್ಞಾನ ಪ್ರಯೋಗಾಲಯ   

ಶಿರಸಿ: ವಿಜ್ಞಾನ ವಿಷಯ ಸುಲಭಗೊಳಿಸುವ ಕನಸಿನೊಂದಿಗೆ ರಚನೆಗೊಂಡಿರುವ ಹಲವಾರು ಮಾದರಿಗಳನ್ನೊಳಗೊಂಡ ಪುಟ್ಟ ಗ್ರಂಥಾಲಯ ಸಹಿತ ಪ್ರಯೋಗಾಲಯ ಹಳ್ಳಿ ಶಾಲೆಗಳ ಎದುರು ನಿಂತು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ. ಕದ ತೆರೆದರೆ ವಿಜ್ಞಾನ ಲೋಕವೇ ಅನಾವರಣಗೊಳ್ಳುವ ಈ ಪುಟ್ಟ ಪ್ರಯೋಗಾಲಯವನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಇಲ್ಲಿನ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಮಿಯಾರ್ಡ್ಸ್‌) ಇಂಥದ್ದೊಂದು ಮೊಬೈಲ್‌ ಪ್ರಯೋಗಾಲಯ ರಚಿಸಿದ್ದು ಅದಕ್ಕೆ ‘ಡಾ. ಅಬ್ದುಲ್ ಕಲಾಂ ಮೊಬೈಲ್ ಸೈಯನ್ಸ್‌ ಸೆಂಟರ್, ಲೈಬ್ರರಿ’ ಎಂದು ನಾಮಕರಣ ಮಾಡಿದೆ.

5ರಿಂದ 8ನೇ ತರಗತಿಯ ವಿಜ್ಞಾನ ಪಾಠಗಳಲ್ಲಿ ಬರುವ ಭೌತ, ರಸಾಯನ ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಮೊಬೈಲ್ ಪ್ರಯೋಗಾಲಯದ ಎರಡೂ ಬದಿಗಳಲ್ಲಿ ಸಾಲಾಗಿ ಇಡಲಾಗಿದೆ. ಮಕ್ಕಳು ಇದನ್ನು ನೋಡಿ ಶಿಕ್ಷಕರಿಂದ ವಿವರಣೆ ಪಡೆದುಕೊಳ್ಳಬಹುದು. ಮಕ್ಕಳಿಗೆ ವಿವರ ನೀಡಲು ಒಬ್ಬರು ಶಿಕ್ಷಕರು, ಒಬ್ಬರು ತಂತ್ರಜ್ಞರು ವಾಹನದ ಜೊತೆಗಿರುತ್ತಾರೆ.

ಪ್ರಯೋಗಾಲಯಕ್ಕೆಂದು ಸಿದ್ಧಪಡಿಸಿರುವ ಬಸ್‌ ಒಳಗಿನ ವಿನ್ಯಾಸವನ್ನು ಎಂಜಿನಿಯರ್‌ ಮನು ಹೆಗಡೆ ರೂಪಿಸಿದ್ದಾರೆ. ‘150ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಮೊಬೈಲ್ ಪ್ರಯೋಗಾಲಯ ಹೊಂದಿದೆ. ಎಲ್‌ಸಿಡಿ ಪ್ರಾಜೆಕ್ಟ್‌ ಅನ್ನು ಸಹ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ವಿವರಣೆ ನೀಡಲು ಸುಲಭವಾಗುತ್ತದೆ. ಆರು ತಿಂಗಳ ನಿರಂತರ ಶ್ರಮದಿಂದ ಇದನ್ನು ತಯಾರಿಸಲಾಗಿದೆ’ ಎನ್ನುತ್ತಾರೆ ಅವರು.

ಪ್ರಯೋಗಾಲಯದ ಜೊತೆಗೆ ಮಕ್ಕಳ ಆಸಕ್ತಿ ಕ್ಷೇತ್ರದ ಪುಸ್ತಕಗಳನ್ನು ಸಹ ಇಡಲಾಗಿದೆ. ಪ್ರಯೋಗಾಲಯ ನೋಡಲು ಬರುವ ಮಕ್ಕಳು ಪುಸ್ತಕವನ್ನು ಪಡೆದು ಓದಬಹುದು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳ ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ ವಾಹನ ಸಂಚರಿಸುವ ಯೋಜನೆ ರೂಪಿಸಲಾಗಿದೆ. ಪ್ರಯೋಗಾಲಯದ ಕೊರತೆ ಇರುವ ಶಾಲೆಗಳಿಗೆ ಇದು ಅನುಕೂಲವಾಗಲಿದೆ. ಶಾಲಾ ರಜಾ ದಿನಗಳು, ದೀರ್ಘ ರಜೆ ಹೊರತುಪಡಿಸಿ ವರ್ಷವಿಡೀ ಮೊಬೈಲ್‌ ಪ್ರಯೋಗಾಲಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್. ಹೆಗಡೆ ವಿವರಣೆ ನೀಡಿದರು.

‘ಡಾ. ಗುರುರಾಜ ಕರ್ಜಗಿ ಅವರು ಸುಪ್ರಜಾ ಫೌಂಡೇಷನ್ ಹಾಂಕಾಂಗ್‌ ಮೂಲಕ ಪ್ರಯೋಗಾಲಯ ಸಿದ್ಧತೆಗೆ ಹಣಕಾಸು ನೆರವು ನೀಡಿದ್ದಾರೆ. ವಾಹನ ತಯಾರಿಗೆ ₹ 24 ಲಕ್ಷ, ವಿಜ್ಞಾನ ಉಪಕರಣ, ಇತರ ಸಾಮಗ್ರಿಗೆ ₹ 8 ಲಕ್ಷ ವೆಚ್ಚವಾಗಿದೆ’ ಎಂದು ಡಾ. ಶಿವರಾಮ ಕೆ. ವಿ. ಹೇಳಿದರು.
ಮಾನವನ ದೇಹ ರಚನೆ, ಡೀಸೆಲ್ ಯಂತ್ರಗಳು, ಸಸ್ಯ ಹಾಗೂ ಪ್ರಾಣಿ ಜೀವಕೋಶ, ಟಿ.ವಿ, 500 ಲೀಟರ್ ನೀರು ಸಂಗ್ರಹ ಟಾಕಿ ಸಹಿತ ಸಕಲ ವ್ಯವಸ್ಥೆಗಳು ಪ್ರಯೋಗಾಲಯದಲ್ಲಿವೆ. ಜನರೇಟರ್ ಮತ್ತು ಬ್ಯಾಟರಿ ಮೂಲಕ ನಡೆಸಲಾಗುತ್ತಿದ್ದು ಸೋಲಾರ್ ಅಳವಡಿಸುವ ಉದ್ದೇಶವಿದೆ ಎಂದು ಜಿ.ಎನ್. ಹೆಗಡೆ ಮುರೇಗಾರ ಹೇಳಿದರು.

***

ಗ್ರಾಮೀಣ ಭಾಗದ 150 ಶಾಲೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದ್ದು, ಮೊಬೈಲ್ ಪ್ರಯೋಗಾಲಯ ಒಂದು ಇಡೀ ದಿನ ಒಂದು ಶಾಲೆಯಲ್ಲಿರುತ್ತದೆ.
- ಎಲ್‌.ಎಂ. ಹೆಗಡೆ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.