ADVERTISEMENT

ಕಡಲತೀರದಲ್ಲಿ ಹರಿಯುವ ಕೊಳಚೆ ನೀರು

ವಾಯುವಿಹಾರಿಗಳಿಗೆ ವಾಸನೆಯ ಕಿರಿ ಕಿರಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 8:51 IST
Last Updated 15 ಸೆಪ್ಟೆಂಬರ್ 2014, 8:51 IST

ಕಾರವಾರ: ಕಡಲ ಅಲೆಗಳ ಜೊತೆ ಹಗುರವಾಗಿ ಬೀಸುವ ತಂಗಾಳಿಯಲ್ಲಿ ಒಂದಷ್ಟು ಸಮಯ ಕಳೆಯಲು ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರಕ್ಕೆ ಬರುವ ವಾಯು ವಿಹಾರಿಗಳಿಗೆ, ನಗರಸಭೆ ಸೃಷ್ಟಿಸಿದ ಅವಾಂತರದಿಂದ ದುರ್ವಾಸನೆಯ ವೇದನೆ ಕಾಡುತ್ತಿದೆ.

ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಎಂ.ಜಿ. ರಸ್ತೆ ಪಕ್ಕದಲ್ಲಿರುವ ತೆರೆದ ಚರಂಡಿಗೆ  ಒಳಚರಂಡಿ  ಕೊಳಚೆ (ಯುಜಿಡಿ) ನೀರನ್ನು ಬಿಡಲಾಗುತ್ತಿದೆ. ಇದು ತಾಲ್ಲೂಕು ಪಂಚಾಯ್ತಿ ಪಕ್ಕದಿಂದ ಹಾದು ಯುದ್ಧನೌಕೆ ಸಂಗ್ರಹಾಲಯದ ಬಳಿ ಅರಬ್ಬಿ ಸಮುದ್ರ ಸೇರುತ್ತಿದೆ. ಈ ಕೊಳಚೆ ನೀರು ದುರ್ವಾಸನೆಯಿಂದ ಕೂಡಿರುವುದರಿಂದ ನಗರವಾಸಿಗಳು ಕಡಲತೀರದಲ್ಲಿ ಮೂಗು ಮುಚ್ಚಿಕೊಂಡೇ ವಿಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಲಂಡನ್‌ ಬ್ರಿಜ್‌ನಿಂದ ಕೋಡಿಬಾಗದವರೆಗೆ ಹಬ್ಬಿರುವ ವಿಶಾಲ ಕಡಲತೀರದಲ್ಲಿ  ನಿತ್ಯ ಮುಂಜಾನೆ ಮತ್ತು ಸಂಜೆ ನೂರಾರು ಮಂದಿ ಬರುತ್ತಾರೆ. ಯೋಗಾಸನ, ನೃತ್ಯ, ಕರಾಟೆ, ಈಜು, ವ್ಯಾಯಾಮ, ಕ್ರೀಡೆ ಹೀಗೆ ಹಲವು ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಜನರ ದಂಡೇ ಅಲ್ಲಿ ನೆರೆದಿರುತ್ತದೆ. ಹೀಗಿರುವಾಗ ವಿಪರೀತ ದುರ್ವಾಸನೆ ಬೀರುವ ಕೊಳಕು ನೀರನ್ನು ಸಮುದ್ರಕ್ಕೆ ಬಿಟ್ಟಿರುವುದು ವಾಯುವಿಹಾರಿಗಳನ್ನು ಕೆರಳಿಸಿದೆ.

ಸರ್ಕಾರಿ ಸಿಬ್ಬಂದಿಗೂ ನರಕ: ಇದೇ ಚರಂಡಿಯ ಅಕ್ಕ ಪಕ್ಕದಲ್ಲಿ ತಾಲ್ಲೂಕು ಪಂಚಾಯ್ತಿ, ಕೃಷಿ ಇಲಾಖೆ, ಪೊಲೀಸ್‌ ವಿಶ್ರಾಂತಿ ಗೃಹ, ಎನ್‌ಸಿಸಿ ಕಚೇರಿಗಳಿವೆ. ಯುಜಿಡಿಯಿಂದ ಬರುವ ಕೊಳಚೆ ನೀರಿನ ವಾಸನೆ ಈ ಕಚೇರಿಗಳ ಸಿಬ್ಬಂದಿಯನ್ನೂ ಹೈರಾಣಾಗಿಸಿದೆ.
‘ನೀರಿನ ವಾಸನೆಯಿಂದಾಗಿ ಕಚೇರಿಯಲ್ಲಿ ಇದ್ದಷ್ಟು ಹೊತ್ತು ನರಕ ಯಾತನೆಯಾಗುತ್ತಿದೆ. ಊಟ ಸಹ ಸೇರುತ್ತಿಲ್ಲ. ಆದಷ್ಟು ಬೇಗ ಈ ವಾಸನೆಯಿಂದ ಮುಕ್ತಿ ಸಿಕ್ಕಿದರೆ ಸಾಕು ಎನಿಸುತ್ತಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಚೇರಿಯ ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘ನಗರದಲ್ಲಿ ಯುಜಿಡಿ ವ್ಯವಸ್ಥೆ ಪೂರ್ತಿ ಕೆಟ್ಟು ಹೋಗಿದೆ. ಆದರೂ ಅದಕ್ಕೆ ನೂರಾರು ಅನಧೀಕೃತ ಜೋಡಣೆ ನೀಡಲಾಗಿದೆ. ಇದರಿಂದ ಎಲ್ಲಾ ಮ್ಯಾನ್‌ಹೋಲ್‌ಗಳು ತುಂಬಿ ನೀರು ಹೊರ ಚೆಲ್ಲುತ್ತಿವೆ. ಹೀಗಾಗಿ ಮ್ಯಾನ್‌ಹೋಲ್‌ ಒಡೆದು ನೀರನ್ನು ತೆರೆದ ಚರಂಡಿಗೆ ನೇರವಾಗಿ ಬಿಡಲಾಗುತ್ತಿದೆ. ಇದು ತುಂಬಾ ಅಪಾಯಕಾರಿ. ಚರಂಡಿ ನೀರನ್ನು ಶುದ್ಧೀಕರಣ ಘಟಕದಲ್ಲಿ ಸ್ವಚ್ಛಗೊಳಿಸಿದ ನಂತರವೇ ಸಮುದ್ರಕ್ಕೆ ಬಿಡಬೇಕು. ಆದರೆ, ನಗರಸಭೆಯಿಂದ ಇದು ಪಾಲನೆಯಾಗುತ್ತಿಲ್ಲ’ ಎಂದು ನಗರಸಭೆ ಸದಸ್ಯ ದೇವಿದಾಸ ನಾಯ್ಕ ದೂರಿದರು.

‘ಕಾರವಾರದಲ್ಲಿ ಸದ್ಯಕ್ಕೆ ಟ್ಯಾಗೋರ್‌ ಕಡಲತೀರ ಮಾತ್ರ ಉಳಿದುಕೊಂಡಿದೆ. ಪ್ರತಿ ನಿತ್ಯ ನೂರಾರು ಮಂದಿ ಇಲ್ಲಿಗೆ ಬಂದು ಸಮಯ ಕಳೆಯುತ್ತಾರೆ. ವ್ಯಾಯಾಮ ಮಾಡುತ್ತಾರೆ. ಇಂತಹ ತೀರಕ್ಕೆ ಕೊಳಚೆ ನೀರು ಬಿಟ್ಟು ಹಾಳು ಮಾಡುತ್ತಿರುವುದು ಸರಿಯಲ್ಲ. ಇದರ ಬಗ್ಗೆ ನಗರಸಭೆ ಅಧ್ಯಕ್ಷರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ಕಡಲ ತೀರದಲ್ಲಿ ಸ್ವಚ್ಛತೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಚರಂಡಿ ನೀರಿನ ವಾಸನೆಯಿಂದ ಹಿಂಸೆಯಾಗುತ್ತಿದೆ. ಮೀನುಗಾರಿಕೆಗೂ ಕಿರಿ ಕಿರಿಯಾಗುತ್ತಿದೆ. ಇತ್ತೀಚೆಗಂತೂ ತೀರದಲ್ಲಿ ಬಂದು ಮದ್ಯ ಸೇವಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಈಗಲೇ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ. ‘ನಗರದ ಎಂಟು ವಾರ್ಡ್‌ಗಳಲ್ಲಿ ಯುಜಿಡಿ ಅಳವಡಿಸಲಾಗಿತ್ತು.

ಎಲ್ಲವೂ ವಿಫಲವಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಹಲವು ಜೋಡಣೆ ನೀಡಲಾಗಿತ್ತು. ಇದರಿಂದಾಗಿ ಮಳೆಗಾಲದಲ್ಲಿ ಕೆಲವು ಕಡೆ ಮ್ಯಾನ್‌ಹೋಲ್‌ ತುಂಬಿ ನೀರು ಚೆಲ್ಲುತ್ತದೆ. ಜಿಲ್ಲಾ ಪಂಚಾಯ್ತಿ ಬಳಿ ಯುಜಿಡಿ ಸೋರಿಕೆಯಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ನಾಲ್ಕೈದು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ನಗರಸಭೆ ಪ್ರಭಾರ ಆಯುಕ್ತ ಮೋಹನರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.