ADVERTISEMENT

ಕದ್ರಾ ಅಣೆಕಟ್ಟಿನಿಂದ ನೀರು ಹೊರಕ್ಕೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 8:00 IST
Last Updated 24 ಜೂನ್ 2014, 8:00 IST

ಕಾರವಾರ: ಕಾಳಿ ನದಿ ಯೋಜನೆ 2ನೇ ಹಂತವಾದ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದ ಕದ್ರಾ ಅಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಏಕಪ್ರಕಾರವಾಗಿ ಏರುತ್ತಿರುವುದರಿಂದ ನೀರನ್ನು ಹೊರಬಿಡುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.        
 
ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀ.ಗಳಿದ್ದು, ಈಗಿನ ಜಲಾಶಯದ ಮಟ್ಟ 30.88 ಮೀಟರ್‌ಗಳಿರುತ್ತದೆ.  ಆದ್ದರಿಂದ ಅಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹರಿಬಿಡಲಾಗುವುದು.

ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಬೇಕು ಎಂದು ಕದ್ರಾ ಅಣೆಕಟ್ಟು ಮತ್ತು ವಿದ್ಯುದಾಗಾರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೋರಿದ್ದಾರೆ.

ಸಾಧಾರಣ ಮಳೆ: ಜಿಲ್ಲೆಯ ಕರಾವಳಿ, ಮಲೆನಾಡು ಮತ್ತು ಅರೆಬಯಲುಸೀಮೆ ಪ್ರದೇಶದಲ್ಲಿ ಸೋಮವಾರ ಮಳೆ ಕ್ಷೀಣಿಸಿದ್ದು, ಎಲ್ಲೆಡೆ ಬಿಸಿಲಿನ ವಾತಾವರಣ ಇತ್ತು.

ಕಾರವಾರ ಮತ್ತು ಸಿದ್ದಾಪುರದಲ್ಲಿ ಮಾತ್ರ ಆಗಾಗ ತುಂತುರು ಮಳೆಯಾಗಿದೆ. ಉಳಿದಂತೆ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾದಲ್ಲಿ ಮಧ್ಯಾಹ್ನ ಬಿಸಿಲಿನ ಝಳ ಜೋರಾಗಿತ್ತು. ಸಂಜೆ ವೇಳೆ ಮೋಡ ಕವಿದ ವಾತಾವಣ ಕಂಡು ಬಂದಿದ್ದು, ಕೆಲವು ಕಡೆ ಆಗಾಗ ಮಳೆ ಹನಿಯಿತು.

ಮಳೆ ಪ್ರಮಾಣ: ಸೋಮವಾರ ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 12.5 ಮಿ.ಮೀ. ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 698.2 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 395.1 ಮಿ.ಮೀ. ಮಳೆ ದಾಖಲಾಗಿದೆ.

ಅಂಕೋಲಾದಲ್ಲಿ 40 ಮಿ.ಮೀ, ಭಟ್ಕಳ 2.8 ಮಿ.ಮೀ, ಹೊನ್ನಾವರ 2.3 ಮಿ.ಮೀ, ಕಾರವಾರ 16.2 ಮಿ.ಮೀ, ಕುಮಟಾ 20.5 ಮಿ.ಮೀ, ಮುಂಡಗೋಡ 1.2 ಮಿ.ಮೀ, ಸಿದ್ದಾಪುರ 48.4ಮಿ.ಮೀ, ಶಿರಸಿ 5 ಮಿ.ಮೀ, ಜೊಯಿಡಾ 2 ಮಿ.ಮೀ ಮಳೆಯಾಗಿದ್ದು, ಯಲ್ಲಾಪುರ ಹಾಗೂ ಹಳಿಯಾಳದಲ್ಲಿ ಮಳೆಯಾಗಿಲ್ಲ.

ಮರ ಬಿದ್ದು ಹಾನಿ
ಯಲ್ಲಾಪುರ: 
ತಾಲ್ಲೂಕಿನಲ್ಲಿ ಶನಿವಾರ ಸುರಿದ ಗಾಳಿಮಳೆಗೆ ಕೊಟ್ಟಿಗೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ನಂದೊಳ್ಳಿ ಗ್ರಾಮ ಪಂಚಾಯ್ತಿ  ವ್ಯಾಪ್ತಿಯ ಜೂಜಿನಬೈಲ್‌ನಲ್ಲಿ ನಡೆದಿದೆ.

ಜೂಜಿನಬೈಲ್‌ ಕೃಷಿಕ ರಾಮಚಂದ್ರ ಭಟ್ಟ ಅವರಿಗೆ ಸೇರಿದ ಕೊಟ್ಟಿಗೆ ಇದಾಗಿದೆ. ಕೊಟ್ಟಿಗೆಯಲ್ಲಿ ಒಂದು ಕರು ಸೇರಿದಂತೆ ಐದು ದನಗಳಿದ್ದವು. ಅದೃಷ್ಟವಶಾತ್ ದನಗಳು ಅಪಾಯದಿಂದ ಪಾರಾಗಿದ್ದು, ಕೊಟ್ಟಿಗೆಯ ಛಾವಣಿ ಹಾನಿಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT