ADVERTISEMENT

‘ಕನಕನ ಕಡೆಗೆ ಕೃಷ್ಣ ಮುಖ ತಿರುಗಿಸಿದ್ದು: ಬಂಡಲ್ ಸಿನಿಮಾ ಕಥೆ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:23 IST
Last Updated 13 ಜನವರಿ 2017, 6:23 IST
ಹೊನ್ನಾವರ: ‘ಉಡುಪಿ ಮಠದಲ್ಲಿ ಶ್ರೀಕೃಷ್ಣ ತನ್ನ ಮುಖ ತಿರುಗಿಸಿ ಕನಕದಾಸರಿಗೆ ದರ್ಶನ ನೀಡಿದನು’ ಎನ್ನುವುದು ಸಿನಿಮಾ, ನಾಟಕ ಅಥವಾ ಕೀರ್ತನೆಗಳಲ್ಲಿ ಬರುವ ಒಂದು ಬಂಡಲ್ ಕಥೆ’ ಎಂದು ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
 
ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕನಕ ಜಯಂತ್ಯುತ್ಸವದ ಅಂಗವಾಗಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ‘ಕನಕನ ಅಧ್ಯಾತ್ಮದ ಲೌಕಿಕ ಆಯಾಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಇತಿಹಾಸ ಕಲ್ಪಿಸಿಕೊಳ್ಳುವಾಗ ನಿಷ್ಠುರ ಸಾಕ್ಷಿ ಪ್ರಜ್ಞೆ ಅವಶ್ಯಕ’ ಎಂದು ಹೇಳಿದರು.
 
ವ್ಯಾಸರಾಯರು, ವಾದಿರಾಜರು ಹಾಗೂ ಪುರಂದರದಾಸರು ಕನಕದಾಸರಿಗೆ ಬೆಂಬಲವಾಗಿ ನಿಂತರು. ಹಂಪಿಯಲ್ಲಿ ಸ್ಥಾಪಿಸಿದ ಭಕ್ತಿ ಸಾಮ್ರಾಜ್ಯವನ್ನು ಉಡುಪಿಯವರೆಗೆ ವಿಸ್ತರಿಸಿದ ಕನಕನ ಆಧ್ಯಾತ್ಮಿಕ ಔನ್ನತ್ಯವನ್ನು ಅರಿತಿದ್ದ ವಾದಿರಾಜರು ಉಡುಪಿಯ ಸಂಪ್ರದಾಯವಾದಿ ಬ್ರಾಹ್ಮಣರ ವಿರೋಧದ ನಡುವೆ ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಪೂರ್ವದ ಬಾಗಿಲು ಮುಚ್ಚಿ ಉತ್ತರದಲ್ಲಿ ಕಿರು ಬಾಗಿಲು ತೆರೆಯಿಸುವ ಜೊತೆಗೆ ಪಶ್ಚಿಮ ದಿಕ್ಕಿನಲ್ಲಿ 9 ರಂಧ್ರಗಳುಳ್ಳ ಕಿಟಕಿಯ ಮೂಲಕ ಕನಕನಿಗೆ ಶ್ರೀಕೃಷ್ಣನ ದರ್ಶನ ಮಾಡಿಸಿದರು’ ಎಂದು ಅವರು ಪ್ರತಿಪಾದಿಸಿದರು.
 
ಬ್ರಾಹ್ಮಣ, ಶೂದ್ರ ಎರಡಕ್ಕೂ ಹೊರತಾದ ತನ್ನದೇ ಆಧ್ಯಾತ್ಮ ಹುಟ್ಟುಹಾಕಿದ ಕನಕ, ರಾಗಿ ಮತ್ತು ಅಕ್ಕಿಯ ಸಂವಾದದ ಪ್ರತೀಕದ ಮೂಲಕ ಶಿಷ್ಟ ಸಂಸ್ಕೃತಿಯನ್ನು ಮಟ್ಟ ಹಾಕಿ ಪರಿಶಿಷ್ಟ ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿದ. ರಾಮ ಹಾಗೂ ಕೃಷ್ಣ ಇಬ್ಬರನ್ನೂ ಒಳಗೊಂಡ ಸಾಂಸ್ಕೃತಿಕ ರಾಜಕಾರಣದ ಸಾಧ್ಯತೆಯನ್ನು ಪರಿಚಯಿಸಿದ. ಜಗತ್ತು ಮಿಥ್ಯವೆನ್ನದೆ ದ್ವೈತ ಮತ್ತು ಅನುಭಾವದ ಪ್ರಜ್ಞೆಯನ್ನು ಬದುಕು ಮತ್ತು ಬರಹಗಳ ಮೂಲಕ ಪ್ರಚುರಪಡಿಸುತ್ತ ಅದ್ವೈತವನ್ನು ಕೂಡ ಸಾಕಾರಗೊಳಿಸಿಕೊಂಡ. ಲೌಕಿಕದ ಸಂಕೇತವಾದ ಕಂಬಳಿ ಹಾಗೂ ಅಲೌಕಿಕತೆಯನ್ನು ಸಂಕೇತಿಸುವ ತಂಬೂರಿ ಕನಕನ ಎರಡು ಆಸ್ತಿಗಳಾಗಿದ್ದವು’ ಎಂದು ಅವರು ಹೇಳಿದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳ ಆದರ್ಶದ ಬಗ್ಗೆ  ಕವಲುದಾರಿಯಲ್ಲಿರುವ ಆಧುನಿಕ ಯುವಜನತೆ ತಿಳಿದುಕೊಳ್ಳಬೇಕಿದೆ’ ಎಂದು ಹೇಳಿದರು.
 
ಜಾತಿ ವಾದವನ್ನು ಮರೆತು ಎಲ್ಲರೂ ಮನುಜರಾಗಿ ಬದುಕಿ, ವಿಶ್ವ ಮಾನವರಾಗಬೇಕಿದೆ. ಆದರ್ಶ ನಾಯಕರ ಜೀವನವನ್ನು ಅನುಸರಿಸಿ, ಸಾಧನೆ ಮಾಡಬೇಕಿದೆ ಎಂದು ಅವರು ಹೇಳಿದರು.
 
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ಬಿ.ಶಿವರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
 
ಡಾ.ಡಿ.ಎಲ್.ಹೆಬ್ಬಾರ ಸ್ವಾಗತಿ ಸಿದರು. ಪ್ರೊ.ನಾಗರಾಜ ಹೆಗಡೆ ಅಪಗಾಲ ಅತಿಥಿ ಪರಿಚಯ ಮಾಡಿದರು.ಪ್ರೊ.ಪ್ರಶಾಂತ ಹೆಗಡೆ ವಂದಿಸಿದರು.
 
ಸಂಗೀತಾ ನಾಯ್ಕ ಕನಕದಾಸರ ಗೀತಗಾಯನ ಪ್ರಸ್ತುತಪಡಿಸಿದರು. ಪ್ರೊ.ಗೋಪಾಲಕೃಷ್ಣ ಹೆಗಡೆ (ಸಂವಾದಿನಿ), ಪ್ರೊ.ಎನ್. ಜಿ.ಅನಂತಮೂರ್ತಿ(ತಬಲಾ) ಸಾಥ್ ನೀಡಿದರು.
 
***
ಮಡಿವಂತಿಕೆ ಭಕ್ತಿಗೆ ಶತ್ರು. ಯಾವುದೇ ಧರ್ಮದ ನಿಷ್ಠ ಮತಾಂಧರಿಂದಲೇ ಆ ಧರ್ಮದ ನಾಶವಾಗಿದೆ ಎಂಬುದನ್ನು ಇತಿಹಾಸದಲ್ಲಿ ಕಂಡುಕೊಳ್ಳಬಹುದು
-ಬಿದರಹಳ್ಳಿ ನರಸಿಂಹಮೂರ್ತಿ
ಸಾಹಿತಿ

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.