ADVERTISEMENT

ಕಬ್ಬು: ಬಾಕಿ ಮೊತ್ತ ಮರಳಿಸಲು ಶೆಟ್ಟರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:49 IST
Last Updated 16 ನವೆಂಬರ್ 2017, 10:49 IST

ಬೆಳಗಾವಿ: ‘ಸಚಿವ ರಮೇಶ ಜಾರಕಿ ಹೊಳಿ ಅವರ ಕಾರ್ಖಾನೆಯೂ ಸೇರಿ ದಂತೆ ಅನೇಕ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಹ‌ಣವನ್ನು ತಕ್ಷಣ ಪಾವತಿಸುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದರು.

ಕಬ್ಬು ಮತ್ತು ಮೆಕ್ಕೆಜೋಳ ರೈತರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಬುಧವಾರ ಪ್ರಸ್ತಾಪಿಸಿದ ಅವರು, ‘ಕಬ್ಬು ಬೆಳೆಗಾರರಿಗೆ 2013ರಿಂದ 2017ರವರೆಗೆ ₹ 74.24 ಕೋಟಿ‌ ಪಾವತಿ ಆಗಬೇಕಿದೆ’ ಎಂದರು.

‘ದರ ನಿಗದಿಪಡಿಸುವ ವಿಷಯ ದಲ್ಲೂ ಸರ್ಕಾರ ಕಾಳಜಿ ವಹಿಸಬೇಕು. ರೈತರ ಹಿತಾಸಕ್ತಿಯಿಂದ ಯೋಗ್ಯ ದರ ನಿಗದಿಪಡಿಸಬೇಕು. ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ADVERTISEMENT

ಬಿಜೆಪಿಯ ಗೋವಿಂದ ಕಾರಜೋಳ, ‘ಮಳೆ ಕೊರತೆಯಿಂದ ಶೇ 50ರಷ್ಟು ರೈತರು ಕಬ್ಬು ಬೆಳೆಯಲು ಮುಂದಾಗಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ‘ಸಕ್ಕರೆ ಸಚಿವರಿಗೆ ಅನುಭವವಿಲ್ಲ. ಹೀಗಾಗಿ ಕಬ್ಬು ಬೆಳೆಗಾರರ ಸಮಸ್ಯೆ ಪರಿ ಹರಿಸಲು ಮುಖ್ಯಮಂತ್ರಿ ಅವರೇ ಸಭೆ ಕರೆಯಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಲಕ್ಷ್ಮಣ ಸವದಿ, 'ಸಕ್ಕರೆ ಕಾರ್ಖಾನೆ ಮಾಲೀಕರು ಟನ್‌ ಕಬ್ಬಿಗೆ ₹ 3,000ದಿಂದ ₹ 3,100 ಗೆ ಕೊಡಲು ಸಿದ್ಧರಿರುವಾಗ, ಸಕ್ಕರೆ ಸಚಿವರು ಸಭೆ ಮಾಡಿ ₹ 2,700 ನಿಗದಿಪಡಿಸಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಉಪಸಮಿತಿಯಲ್ಲಿ ಚರ್ಚಿಸಿ ತೀರ್ಮಾನ: ‘ಮೆಕ್ಕೆಜೋಳ ಖರೀದಿಸುವ ಸಂಬಂಧ ಕೇಂದ್ರದ ಸಚಿವರ ಜೊತೆ ಮಾತುಕತೆ ನಡೆಸಲು ಕೃಷಿ ಸಚಿವರು ಮತ್ತು ಆಹಾರ ಸಚಿವರು ದೆಹಲಿಗೆ ಹೋಗಿದ್ದಾರೆ. ಅವರ ಮರಳಿದ ಬಳಿಕ ಈ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

‘ಈ ಬಾರಿ ಮೆಕ್ಕೆಜೋಳ ಇಳು ವರಿ ಹೆಚ್ಚು ಬಂದಿದೆ. ಕೇಂದ್ರ ಸರ್ಕಾರ ಟನ್‌ಗೆ ₹ 1,450 ದರದಲ್ಲಿ ಅದನ್ನು ಖರೀದಿಸುವಂತೆ ಸೂಚಿಸಿದೆ. ಇದನ್ನು ಪಡಿತರ ಮೂಲಕ ಹಂಚಿಕೆ ಮಾಡುವಂತೆ ತಿಳಿಸಿದೆ. ಆದರೆ, ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಹಂಚಿಕೆ ಮಾಡುತ್ತಿಲ್ಲ. ಅದರ ಬದಲು, ಮೆಕ್ಕೆಜೋಳ ಬೆಳೆಯದ ರಾಜ್ಯಗಳಿಗೆ ಪೂರೈಕೆ ಮಾಡಲು ಅವ ಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.